ಕ್ರಿಕೆಟ್

ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್, ವಾರ್ನರ್ ಅವಶ್ಯಕತೆ ಇದೆ: ಸೋಲಿನ ಬಳಿಕ ನಾಯಕ ಟಿಮ್ ಪೈನೆ ಹೇಳಿಕೆ

Srinivasamurthy VN
ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಆಸಿಸ್ ನಾಯಕ ಟಿಮ್ ಪೈನೆ ಅವರ ಹೇಳಿಕೆಯೊಂದು ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಮ್ ಪೈನೆ, ಆಸಿಸ್ ತಂಡಕ್ಕೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಅನುಪಸ್ಥಿತಿ ಕಾಡುತ್ತಿದ್ದು, ಅವರ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
'ಒಂದು ತಂಡದಲ್ಲಿ 2 ಅಥವಾ ಮೂವರು ಉತ್ತಮ ಆಟಗಾರರು ಇದ್ದರೆ ಖಂಡಿತಾ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ. ತಂಡದಲ್ಲಿ ವಿಶ್ವಮಟ್ಟದ ಆಟಗಾರರ ಕೊರತೆ ಎದ್ದುಕಾಣುತ್ತಿದ್ದು, ಈ ಸಮಸ್ಯೆಗೆ ಶೀಘ್ರ ಪರಿಹಾರ ಕೂಡ ದೊರೆಯಲಿದೆ ಎಂದು ಪೈನೆ ಹೇಳಿದ್ದಾರೆ. ಪ್ರಸ್ತುತ ಪ್ರಭಾವಿ ಆಟಗಾರರ ಅನುಪಸ್ಥಿತಿ ತಂಡವನ್ನು ಕಾಡುತ್ತಿದ್ದು, ಒಮ್ಮೆ ಆ ಆಟಗಾರರ ಸೇರ್ಪಡೆಯಾದ ಬಳಿಕ ಖಂಡಿತಾ ನಿಮಗೆ ಬದಲಾವಣೆ ಕಾಣುತ್ತದೆ ಎಂದು ಹೇಳಿದರು.
ಇನ್ನು ಮೆಲ್ಬೋರ್ನ್ ಪಂದ್ಯದ ಕುರಿತು ಮಾತನಾಡಿದ ಪೈನೆ, ಭಾರತ ತಂಡ ಗೆಲುವಿಗೆ ಅರ್ಹವಾಗಿತ್ತು. ನಿಜಕ್ಕೂ ಭಾರತೀಯ ಬೌಲರ್ ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ಎರಡನೇ ಇನ್ನಿಂಗ್ಸ್ ನಲ್ಲಿ ನಮ್ಮ ಮೇಲೆ ಅತಿಯಾದ 
ಒತ್ತಡವಿತ್ತು. ಆದರೂ ಬಾಲಂಗೋಚಿ ಆಟಗಾರ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಅದ್ಭುತವಾಗಿತ್ತು. ಎಂಸಿಜಿ ಕ್ರೀಡಾಂಗಣದಲ್ಲಿ ಆಸಿಸ್ ನ ಯಾವುದೇ ಕೆಳ ಕ್ರಮಾಂಕದ ಆಟಗಾರ ಅರ್ಧಶತಕ ಬಾರಿಸಿರಲಿಲ್ಲ. ಆದರೆ ಈ ದಾಖಲೆಯಲ್ಲಿ ಕಮಿನ್ಸ್ ಬ್ರೇಕ್ ಮಾಡಿದ್ದಾರೆ. ಕಮಿನ್ಸ್ ಮೂಲಕ ತಂಡಕ್ಕೆ ಮತ್ತೋರ್ವ ಅಲ್ ರೌಂಡರ್ ಸಿಕ್ಕಂತಾಗಿದೆ ಎಂದು ಪೈನೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಜನವರಿ 3 ರಿಂದ ಸಿಡ್ನಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯವನ್ನು ಶತಾಯಗತಾಯ ಆಸ್ಟ್ರೇಲಿಯಾ ತಂಡ ಗೆಲ್ಲಲೇ ಬೇಕಿದೆ, 4 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಲ್ಲಿ ಮುಂದಿದ್ದು, ಸಿಡ್ನಿ ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೂ ಆಸಿಸ್ ಸರಣಿ ಸೋಲು ಖಂಡಿತಾ. ಹೀಗಾಗಿ ಸಿಡ್ನಿಯಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಬಹುದು.
SCROLL FOR NEXT