ಕ್ರಿಕೆಟ್

ದಕ್ಷಿಣ ಆಪ್ರಿಕಾ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಶತಕ, ಸೆಹ್ವಾಗ್ ದಾಖಲೆ ಮುರಿದ ರೋ'ಹಿಟ್' ಶರ್ಮಾ!

Srinivasamurthy VN
ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಸಿಡಿಸಿದ ರೋಹಿತ್ ಶರ್ಮಾ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ  ದಾಖಲೆಯೊಂದನ್ನು ಮುರಿದಿದ್ದಾರೆ.
ಭಾರತ ತಂಡದ ಪರ ಆರಂಭಿಕರಾಗಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮ, ವೀರೇಂದ್ರ ಸೆಹ್ವಾಗ್​ ರ ದಾಖಲೆ ಮುರಿದಿದ್ದಾರೆ. ನಿನ್ನೆ ಪೋರ್ಟ್ ಎಲಿಜೆಬೆತ್ ನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ  ರೋಹಿತ್ ಶರ್ಮಾ, 126 ಎಸೆತಗಳಲ್ಲಿ 115 ರನ್ ಸಿಡಿಸಿದ್ದರು. ಇದು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅವರ 17ನೇ ಶತಕವಾಗಿದ್ದು, ಈ ಹಿಂದೆ ಮೂರು ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದ ಅವರು ಟೆಸ್ಟ್ ಮತ್ತು  ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 19 ಇನಿಂಗ್ಸ್ ಆಡಿದ್ದಾರೆ.
ಇನ್ನು ಈ ಶತಕ ರೋಹಿತ್ ಆರಂಭಿಕರಾಗಿ ಸಿಡಿಸಿದ 15ನೇ ಶತಕವಾಗಿದ್ದು, ಸೆಹ್ವಾಗ್ 14 ಶತಕ ಬಾರಿಸಿದ್ದರು. ಈ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (45) ಅಗ್ರಸ್ಥಾನದಲ್ಲಿದ್ದು, ಸೌರವ್ ಗಂಗೂಲಿ (19) 2ನೇ ಸ್ಥಾನದಲ್ಲಿದ್ದಾರೆ.
ರನೌಟ್ ನಲ್ಲೂ ರೋಹಿತ್-ಕೊಹ್ಲಿ ದಾಖಲೆ!
ಅಂತೆಯೇ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಬಾರಿ ರನೌಟ್ ಆಗುವ ಮೂಲಕ ಬೇರ್ಪಟ್ಟ ಜೋಡಿಯಲ್ಲಿ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಜೋಡಿ ಜಂಟಿ 2ನೇ ಸ್ಥಾನಕ್ಕೇರಿದ್ದು, ಸಚಿನ್ ಹಾಗೂ ಗಂಗೂಲಿ ಜೋಡಿ 176 ಇನಿಂಗ್ಸ್​ ಗಳಲ್ಲಿ 9 ಬಾರಿ ರನೌಟ್ ಆಗಿದ್ದಾರೆ. ಅಲ್ಲದೆ ದ್ರಾವಿಡ್ ಮತ್ತು ಗಂಗೂಲಿ ಜೋಡಿ 87 ಇನಿಂಗ್ಸ್​ಗಳಲ್ಲಿ 7 ಬಾರಿ ರನೌಟ್ ಮೂಲಕ ಬೇರ್ಪಟ್ಟಿದ್ದರು.
SCROLL FOR NEXT