ಕ್ರಿಕೆಟ್

ವಿಜಯ್ ಹಜಾರೆ ಟ್ರೋಫಿ ಗೆಲುವಿನ ಬಳಿಕ ದೇಶಿ ಕ್ರಿಕೆಟ್‌ಗೆ ಕನ್ನಡಿಗ ಅರವಿಂದ್ ವಿದಾಯ

Vishwanath S
ನವದೆಹಲಿ: ವಿಜಯ್ ಹಜಾರೆ ಟ್ರೋಫಿ ಗೆಲುವಿನ ಬಳಿಕ ಕರ್ನಾಟಕದ ವೇಗಿ ಶ್ರೀನಾಥ್ ಅರವಿಂದ್ ದೇಶಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 
33 ವರ್ಷದ ವೇಗಿ ಶ್ರೀನಾಥ್ ಅರವಿಂದ್ ಅವರು 56 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 186 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 41 ಲಿಸ್ಟ್ ಎ ಪಂದ್ಯಗಳಲ್ಲಿ 57 ವಿಕೆಟ್ ಗಳನ್ನು ಪಡೆದಿದ್ದಾರೆ. 
2015ರ ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಶ್ರೀನಾಥ್ ಅರವಿಂದ್ ಟೀಂ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವನ್ನಾಡಿದ್ದು ಅದರಲ್ಲಿ ಒಂದು ವಿಕೆಟ್ ಮಾತ್ರ ಪಡೆದಿದ್ದರು. 
2008ರಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದ್ದ ಅರವಿಂದ್ ಸೌರಾಷ್ಟ್ರ ವಿರುದ್ಧ ಮೊದಲ ಪಂದ್ಯವನ್ನು ಆಡಿದ್ದರು. ಕಾಕತಾಳಿಯವೆಂಬಂತೆ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರದ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ ನಂತರ ದೇಶಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 
ಐಪಿಎಲ್ ನಲ್ಲಿ 50 ಲಕ್ಷ ಮುಖಬೆಲೆ ಹೊಂದಿದ್ದ ಅರವಿಂದ್ ಈ 2018ರ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗಿರಲಿಲ್ಲ. ಇನ್ನು 2011 ರಿಂದ 2017ರವರೆಗೆ 38 ಐಪಿಎಲ್ ಪಂದ್ಯಗಳನ್ನು ಆಡಿದ್ದ ಅವರು 45 ವಿಕೆಟ್ ಗಳನ್ನು ಮಾತ್ರ ಪಡೆದಿದ್ದರು. 
SCROLL FOR NEXT