ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಗೆ ಏಪ್ರಿಲ್ 7ರಂದು ಮುಂಬೈನಲ್ಲಿ ಚಾಲನೆ ನೀಡಲಾಗುತ್ತಿದ್ದು, ಮೇ 27ರಂದು ಮುಂಬೈನಲ್ಲೇ ಫೈನಲ್ ಪಂದ್ಯ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸೋಮವಾರ ಘೋಷಿಸಿದೆ.
ಏಪ್ರಿಲ್ 6ರಂದು ಮುಂಬೈನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ಐಪಿಎಲ್ ಪಂದ್ಯಾವಳಿ ಪ್ರಸಾರ ಮಾಡುವ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಮನವಿಗೆ ಸ್ಪಂದಿಸಿದ ಐಪಿಎಲ್ ಆಡಳಿತ ಮಂಡಳಿ, ಪಂದ್ಯಗಳ ಸಮಯವನ್ನು ಬದಲಾವಣೆ ಮಾಡಿದೆ. ಈ ಹಿಂದೆ ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದ ಪಂದ್ಯ ಈ ಬಾರಿ 7 ಗಂಟೆಗೆ ಆರಂಭವಾಗಲಿದೆ ಮತ್ತು ಸಂಜೆ ನಾಲ್ಕು ಗಂಟೆಗೆ ಆರಂಭವಾಗುತ್ತಿದ್ದ ಪಂದ್ಯವನ್ನು ಈಗ 5.30ಕ್ಕೆ ಬದಲಾಯಿಸಲಾಗಿದೆ.
ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾದರು ಮುಗಿಯಲು ತಡ ರಾತ್ರಿಯಾಗುತ್ತದೆ. ಹೀಗಾಗಿ ಸಮಯ ಬದಲಾವಣೆ ಮಾಡುವಂತೆ ಸ್ಟಾರ್ ಸ್ಪೋರ್ಟ್ಸ್ ಮನವಿ ಮಾಡಿತ್ತು. ಅದನ್ನು ಒಪ್ಪಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಸಭೆಯ ಬಳಿಕ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ತಿಳಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸಹ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಆದರೆ ಇಂದು ಅವರು ಸಭೆಯಲ್ಲಿ ಭಾಗವಹಿಸಿರಲಿಲ್ಲ.