ಕ್ರಿಕೆಟ್

ಮಹಿಳಾ ಏಷ್ಯಾಕಪ್ ಟಿ20: ಮಲೇಷ್ಯಾ ವಿರುದ್ಧ ಭಾರತಕ್ಕೆ 142 ರನ್ ಗಳ ಭರ್ಜರಿ ಜಯ

Srinivasamurthy VN
ಕೌಲಾಲಂಪುರ: ಭಾರತೀಯ ಮಹಿಳಾ ಕ್ರಿಕೆಟ್ ಯಶಸ್ಸಿನ ಉತ್ತಂಗದಲ್ಲಿದ್ದು, ಕೌಲಾಲಂಪುರದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಸರಣಿಯ ಭಾನುವಾರ ನಡೆದ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ಪಡೆ 142 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು ಕೇವಲ 27 ರನ್‌ಗಳಿಗೆ ಆಲೌಟ್‌ ಮಾಡಿರುವ ಭಾರತ ತಂಡ 142 ರನ್‌ಗಳ ಜಯ ಗಳಿಸಿದೆ. ಕಿನರಾರಾ ಅಕಾಡೆಮಿ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ ಮೊದಲು ಬ್ಯಾಟಿಂಗ್‌ ಮಾಡಿತು. ಮಿಥಾಲಿ ರಾಜ್ (ಅಜೇಯ 97 ರನ್) ಅವರ ಅಮೋಘ ಬ್ಯಾಟಿಂಗ್  ಮತ್ತು ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ್ ಹರ್ಮನ್ ಪ್ರೀತ್ ಕೌರ್ (32 ರನ್) ಅವರ ಪ್ರಬಲ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಚಕ್ಕೆ 169ರನ್ ಕಲೆ ಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಮಲೇಷ್ಯಾ ತಂಡ ಕೇವಲ 13.4 ಓವರ್ ಗಳಲ್ಲಿ 27 ರನ್ ಗಳಿಸಿ ಆಲ್ ಔಟ್ ಆಯಿತು. ಮಲೇಷ್ಯಾ ತಂಡವನ್ನು ಕಾಡಿದ ಭಾರತ ತಂಡದ ಬೌಲರ್ ಗಳಾದ ಪೂಜಾ ವಸ್ತ್ರಾಕರ್ 3 ವಿಕೆಟ್, ಪೂನಂ ಯಾದವ್ ಮತ್ತು ಅನುಜಾ ಪಾಟೀಲ್ ತಲಾ 2 ವಿಕೆಟ್ ಕಬಳಿಸಿದರೆ, ಶಿಖಾ ಪಾಂಡೆ 1 ವಿಕೆಟ್ ಪಡೆದರು. ಇನ್ನುಮಲೇಷ್ಯಾ ಪರ ಯಾವೊಬ್ಬ ಆಟಗಾರ್ತಿ ಕೂಡ ಎರಡಂಕಿ ಮೊತ್ತ ದಾಟಲೇ ಇಲ್ಲ. 11 ಆಟಗಾರ್ತಿಯರ ಪೈಕಿ 6 ಆಟಗಾರ್ತಿಯರು ಶೂನ್ಯಕ್ಕೆ ಔಟ್ ಆಗಿದ್ದಾರೆ. 
ಅಂತಿಮವಾಗಿ ಭಾರತ ತಂಡ ಮಲೇಷ್ಯಾ ವಿರುದ್ಧ 142 ರನ್ ಗಳ ಭರ್ಜರಿ ಜಯ ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
SCROLL FOR NEXT