ನವದೆಹಲಿ: ಇಂಗ್ಲೆಂಡ್ ವಿರುದ್ಧ ತೀರಾ ಕಳಪೆ ಪ್ರದರ್ಶನ ನೀಡಿ ಸರಣಿ ಕೈಚೆಲ್ಲಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತದ ಮಾಜಿ ನಾಯಕ ಸೌರವ್ ಗಂಗೂಲ್ ಕೆಂಡಾಮಂಡಲರಾಗಿದ್ದಾರೆ.
ಆಸಿಸ್ ತಂಡದ ಕಳಪೆ ಪ್ರದರ್ಶನದ ವಿರುದ್ಧ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಗಂಗೂಲಿ, ಏಕದಿನ ಕ್ರಿಕೆಟ್ ಸಾಗುತ್ತಿರುವ ದಾರಿ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಂತೆಯೇ ಶೇನ್ ವಾರ್ನ್, ಮೆಗ್ರಾತ್, ಬ್ರೆಟ್ ಲೀ, ಮೆಕ್ ಡಮೆರ್ಟ್, ಗಿಲೆಸ್ಪಿ ರಂತಹ ವಿಶ್ವಶ್ರೇಷ್ಠ ಬೌಲರ್ ಗಳಿದ್ದ ತಂಡದಿಂದ ಇಂತಹ ಕಳಪೆ ಬೌಲಿಂಗ್ ನಂಬಲೂ ಅಸಾಧ್ಯ ಎಂದು ಕಿಡಿಕಾರಿದ್ದಾರೆ.
'ವಾತಾವರಣ ಏನೇ ಇರಲಿ, ಎದುರಾಳಿ ದಾಳಿಯ ಕೌಶಲ್ಯ ಹೇಗೇ ಇರಲಿ. 50 ಓವರ್ ಗಳಲ್ಲಿ ಒಂದು ತಂಡ 500 ರನ್ ಗಳ ಗಡಿ ಸಮೀಪ ತಲುಪುತ್ತದೆ ಎಂದರೆ ಕ್ರಿಕೆಟ್ ಸಾಗುತ್ತಿರುವ ದಾರಿಯ ಬಗ್ಗೆ ಆತಂಕ ಶುರುವಾಗಿದೆ. ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಇಂಗ್ಲೆಂಡ್ 481 ರನ್ ಪೇರಿಸಿರುವುದು ನೋಡಿದರೆ ಭವ್ಯ ಆಟದ ಸ್ವಾಸ್ಥ್ಯದ ಬಗ್ಗೆ ನನಗೆ ಭಯಾವುಗುತ್ತಿದೆ. ಪರಿಸ್ಥಿತಿ ಏನೇ ಇರಲಿ ಆಸ್ಚ್ರೇಲಿಯಾ ಬೌಲಿಂಗ್ ದಾಳಿಯನ್ನು ಈ ಪರಿ ಚಚ್ಚುತ್ತಾರೆ ಎಂದರೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶೇನ್ ವಾರ್ನ್, ಮೆಗ್ರಾತ್, ಬ್ರೆಟ್ ಲೀ, ಮೆಕ್ ಡಮೆರ್ಟ್, ಗಿಲೆಸ್ಪಿ, ಲಿಲ್ಲಿ, ಧಾಮ್ಸನ್ ಬೆಮೋ ರಂತಹ ವಿಶ್ವಶ್ರೇಷ್ಠ ಬೌಲರ್ ಗಳಿದ್ದ ತಂಡ ಈ ಪರಿ ಬೌಲಿಂಗ್ ನಲ್ಲಿ ಹೆಣಗುವುದನ್ನು ನೋಡಲು ಸಾಧ್ಯವಿಲ್ಲ'.
'ನಾನಿಂದು ನೋಡಿದ್ದು ಶಾಲೆಯಲ್ಲಿ ಆಡುತ್ತಿದ್ದ ಬುಕ್ ಕ್ರಿಕೆಟ್ಟಾ ಅಥವಾ ನಿಜವಾದ ಪಂದ್ಯವೇ.. ವಿಶ್ವಶ್ರೇಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ ಅತಿ ಸಾಮಾನ್ಯ ದರ್ಜೆಯ ಪ್ರದರ್ಶನ ನೀಡುತ್ತಿರುವುದು ಊಹಿಸಲೂ ಸಾಧ್ಯವಿಲ್ಲ. ನಿಜಕ್ಕೂ ಇದು ಸಾಧ್ಯವೇ ಎಂಬ ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಕ್ರಿಕೆಟ್ ಎಂದ ಮೇಲೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದರ ಮಿಶ್ರಣ, ಅದರಲ್ಲೂ ಪಂದ್ಯ ಗೆಲ್ಲಲು ಉತ್ತಮ ಬೌಲಿಂಗ್ ಅತ್ಯವಶ್ಯಕ. ಉತ್ತಮ ಬೌಲರ್ ಗಳಿಲ್ಲದೇ ಬ್ಯಾಟ್ಸಮನ್ ಗಳಿರಲು ಸಾಧ್ಯವೇ ಇಲ್ಲ. ಆದರೆ ಬೌಲರ್ ಗಳು ಇಷ್ಟು ನಿಕೃಷ್ಟರಾದರೆ ಹೇಗೆ'.
ಇಷ್ಟಾದರೂ ಕ್ರಿಕೆಟ್ ಸಾಯದು ಎಂಬ ಆಶಾಭಾವನೆ ನನಗಿದೆ. ಕ್ರಿಕೆಟ್ ಆರಾಧಿಸುವ ರಾಷ್ಟ್ರಗಳಲ್ಲಿ ಉತ್ತಮ ಬೌಲರ್ ಗಳಿದ್ದಾರೆ ಮತ್ತು ಇರುತ್ತಾರೆ. ಹಿಂದೆ ಮೆಗ್ರಾತ್, ಬ್ರೆಟ್ ಲೀ, ಶೇನ್ ವಾರ್ನ್ ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಮಿಂಚಿದ್ದರು. ಇದೇ ಬದ್ಧತೆಯನ್ನು ಮಿಚೆಲ್ ಸ್ಟಾರ್ಕ್, ಹೇಜಲ್ ವುಡ್ ಮತ್ತು ಇತರರು ತೋರಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ.