ಜೋಹಾನ್ಸ್ ಬರ್ಗ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ರನ್ನು ಔಟ್ ಮಾಡಿದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೋ ರಬಾಡ ಅನುಚಿತ ವರ್ತನೆ ತೋರಿದ್ದು ಈ ಹಿನ್ನೆಲೆಯಲ್ಲಿ ಐಸಿಸಿ ರಬಾಡಗೆ ಎರಡು ಪಂದ್ಯಗಳಿಗೆ ನಿಷೇಧ ಹೇರಿದೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ರನ್ನು ರಬಾಡ ಉದ್ದೇಶಪೂರ್ವಕವಾಗಿ ತಳ್ಳಿದ್ದು ಇದನ್ನು ಪಂದ್ಯದ ರೆಫ್ರಿ ನಡೆಸಿದ ವಿಚಾರಣೆ ವೇಳೆ ರಬಾಡ ತಪ್ಪೊಪ್ಪಿಕೊಂಡಿದ್ದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ ಗಳಿಂದ ಗೆಲುವು ಸಾಧಿಸಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿತು.
ಇನ್ನು ರಬಾಡ ಕಳೆದ 24 ತಿಂಗಳೊಳಗೆ 8 ಡಿಮೇರಿಟ್ ಅಂಕಗಳನ್ನು ಪಡೆದಿದ್ದಾರೆ. ಅವರ ಅನುಚಿತ ವರ್ತನೆ ಸಾಬೀತಾಗಿದ್ದರಿಂದ ಅವರಿಗೆ ಮುಂದಿನ ಎರಡು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ ಎಂದು ಐಸಿಸಿ ತಿಳಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಎರನಡೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಕಾಗಿಸೋ ರಬಾಡ 150 ರನ್ ನೀಡಿ 11 ವಿಕೆಟ್ ಪಡೆದು ಪಂದ್ಯ ಗೆಲುವಿನ ಕಾರಣಕರ್ತರಾಗಿದ್ದರು.