ಕ್ರಿಕೆಟ್

ಸ್ಟೀವ್ ಸ್ಮಿತ್ ಕ್ರಿಮಿನಲ್ ಅಲ್ಲ': ವಿಮಾನ ನಿಲ್ದಾಣದಲ್ಲಾದ ಅಪಮಾನದ ಕುರಿತು ಕ್ರಿಕೆಟಿಗರ ಆಕ್ರೋಶ

Srinivasamurthy VN
ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಗೆ ಜೋಹಾನ್ಸ್ ಬರ್ಗ್ ವಿಮಾನ ನಿಲ್ದಾಣದಲ್ಲಾದ ಅಪಮಾನದ ವಿರುದ್ಧ ಮಾಜಿ ಕ್ರಿಕೆಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ತೀವ್ರ ಮುಜುಗರದ ಸನ್ನಿವೇಶ ಎದುರಿಸಿದ್ದು, ಜೋಹಾನ್ಸ್ ಬರ್ಗ್ ವಿಮಾನ ನಿಲ್ದಾಣದಲ್ಲಿ ಕೆಲವರು ಸ್ಮಿತ್ ರನ್ನು ವಂಚಕ, ಮೋಸಗಾರ ಎಂದು ಕರೆದಿದ್ದಾರೆ. ಅಲ್ಲದೆ ಏರ್ ಪೋರ್ಟ್ ಗೆ ಬಂದಿಳಿದ ಸ್ಮಿತ್ ರನ್ನು ಪೊಲೀಸರು ಹಾಗೂ ಮಾಧ್ಯಮದವರು ಸುತ್ತುವರಿದಿದ್ದರು. ಮಾಧ್ಯಮದವರು ಒಂದೇ ಸಮನೆ ಪ್ರಶ್ನೆಗಳ ಸುರಿಮಳೆಗೈದರು. ಅಂತೆಯೇ ವಿಮಾನ ನಿಲ್ದಾಣದಲ್ಲಿದ್ದ ಜನ ಸ್ಮಿತ್ ರನ್ನು ಚೀಟರ್ ಎಂದು ಜರಿದಿದ್ದಾರೆ. 
ಇದೇ ವೇಳೆ ಜೋಹಾನ್ಸ್ ಬರ್ಗ್ ಪೊಲೀಸರು ಸ್ಮಿತ್ ರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು, ಓರ್ವ ಕಳ್ಳನನ್ನು ಕರೆತರುವಂತೆ ಸ್ಮಿತ್ ರನ್ನು ವಿಮಾನ ನಿಲ್ದಾಣದಲ್ಲಿ ಕರೆತಂದರು. ಸ್ಮಿತ್ ರನ್ನು ಸುತ್ತುವರೆದಿದ್ದ 10 ರಿಂದ 15 ಮಂದಿ ಪೊಲೀಸರು ಸ್ಮಿತ್ ರನ್ನು ಎಳೆದು ಒಯ್ಯುವಂತೆ ಭಾಸವಾಗುತ್ತಿತ್ತು. ಈ ಪ್ರಕರಣ ಇದೀಗ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಮಿತ್ ತಪ್ಪು ಮಾಡಿದ್ದಾರೆ ನಿಜ. ಆದರೆ ಅವರು ಕ್ರಿಮಿನಲ್ ಅಲ್ಲ ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಹೆರಾಲ್ಟ್ ಸನ್ ಪತ್ರಿಕೆಗೆ ಅಂಕಣ ಬರೆದಿರುವ ಆಸಿಸ್ ಮಾಜಿ ಕ್ರಿಕೆಟಿಗ ಶೇನ್ ವಾರ್ನ್, ತಪ್ಪಿಗೆ ಶಿಕ್ಷೆ ಸರಿ. ಆದರೆ ಅವರು ಕ್ರಿಮಿನಲ್ ಗಳಲ್ಲ ಎಂದು ಹೇಳಿದ್ದಾರೆ.
SCROLL FOR NEXT