ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಸನ್ ರೈಸರ್ಸ್ ಹೈದರಾಬಾದ್ ತಂಡ 179 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಲಿಯಮ್ಸನ್ ಪಡೆ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳ ಕಲೆಹಾಕಿತು. ಇನ್ನಿಂಗ್ಸ್ ನ ಆರಂಭದಲ್ಲೇ ಆಘಾತ ಎದುರಿಸಿದ ಹೈದರಾಬಾದ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ (47 ರನ್) ಮತ್ತು ಯೂಸುಫ್ ಪಠಾಣ್ (ಅಜೇಯ 45 ರನ್) ಬೆನ್ನೆಲುಬಾಗಿ ನಿಂತರು. ಇನ್ನಿಂಗ್ಸ್ ನ ಅಂತಿಮ ಘಟ್ಟದಲ್ಲಿ ಕಾರ್ಲೋಸ್ ಬ್ರಾಥ್ ವೇಟ್ ಅಬ್ಬರಿಸುವುದರೊಂದಿಗೆ ಹೈದರಾಬಾದ್ ತಂಡ 170 ರನ್ ಗಡಿ ದಾಟಿತು.
ಬ್ರಾಥ್ ವೇಟ್ ಕೇವಲ 11 ಎಸೆತಗಳನ್ನು ಎದುರಿಸಿ 21 ರನ್ ಸಿಡಿಸಿದರು. ಅವರ ಇನ್ನಿಂಗ್ಸ್ ನಲ್ಲಿ 3 ಭರ್ಜರಿ ಸಿಕ್ಸರ್ ಕೂಡ ಸೇರಿತ್ತು, ಇನ್ನು ಬೌಲಿಂಗ್ ನಲ್ಲಿ ಚೆನ್ನೈ ಪರ ಲುಂಗಿ ನ್ಗಿಂಡಿ, ಶಾರ್ದೂಲ್ ಠಾಕೂರ್, ಕರಣ್ ಶರ್ಮಾ, ಡ್ವೇನ್ ಬ್ರಾವೋ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.