ಲಖನೌ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಭರ್ಜರಿ ಶತಕ(111*)ದ ನೆರವಿನೊಂದಿಗೆ ನಿಗದಿತ 20 ಓವರ್ ಗಳಲ್ಲಿ 195ರನ್ ಗಳ ಬೃಹತ್ ಮೊತ್ತ ಸೇರಿಸಿದೆ.
ಲಖನೌನ ಅಟಲ್ ಬಿಹಾರಿ ಪಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ರನ್ ಕಲೆ ಹಾಕುವ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ಗೆ 196 ರನ್ಗಳ ಬೃಹತ್ ಗುರಿ ನೀಡಿದೆ.
ದೀಪಾವಳಿ ಹಬ್ಬದಂದು ಆಕ್ರಮಣಕಾರಿ ಆಟವಾಡಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 123 ರನ್ ಜತೆಯಾಟ ನೀಡಿ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 43 ರನ್ ಗಳಿಸಿದ್ದ ಧವನ್ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ರಿಷಬ್ ಪಂತ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿರದೆ ಕೇವಲ 5 ರನ್ ಗಳಿಸಿ ಔಟಾದರು.
ರೋಹಿತ್ ಶರ್ಮಾ ಅವರು ಕೇವಲ 61 ಎಸೆತಗಳಲ್ಲಿ 7 ಸಿಕ್ಸರ್, 8 ಬೌಂಡರಿ ಸಿಡಿಸುವ ಮೂಲಕ ಅಜೇಯ 111 ರನ್ ಗಳಿಸಿ ಜವಾಬ್ದಾರಿಯುತ ನಾಯಕನ ಆಟ ಪ್ರದರ್ಶಿಸಿದರು.
ಇನ್ನು 14 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದ ಕನ್ನಡಿಗ ಕೆಎಲ್ ರಾಹುಲ್ ಕೊನೆಯಲ್ಲಿ ಉತ್ತಮ ಜತೆಯಾಟವಾಡಿದರು.