ನವದೆಹಲಿ: 2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಹಾಗೂ ಭಾರತದ ಪ್ರಮುಖ ವೇಗಿ ಮುನಾಫ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿರುವ ಮುನಾಫ್ ಪಟೇಲ್ ತಮ್ಮ 15 ವರ್ಷಗಳ ಸ್ಪರ್ಧಾತ್ಮಕ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 'ನಿವೃತ್ತಿಯಾಗಲು ನನಗೆ ಬೇಸರವಿಲ್ಲ. ನನ್ನೊಂದಿಗೆ ಆಡಿರುವ ಹೆಚ್ಚಿನ ಎಲ್ಲ ಕ್ರಿಕೆಟಿಗರು ನಿವೃತ್ತಿಯಾಗಿದ್ದಾರೆ. ಧೋನಿ ಮಾತ್ರ ನಿವೃತ್ತಿಯಾಗಲು ಬಾಕಿ ಇದ್ದಾರೆ. ನನಗೆ ಕ್ರಿಕೆಟ್ ಬಿಟ್ಟು ಬೇರೆನೂ ಗೊತ್ತಿಲ್ಲ. ಫಿಟ್ನೆಸ್ ಕೊರತೆಯೇ ನನ್ನ ಈ ನಿರ್ಧಾರಕ್ಕೆ ಕಾರಣ. ಯುವಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ದಾರಿ ಮಾಡಿಕೊಡುವುದು ನಮ್ಮಂತಹ ಆಟಗಾರರ ಕೆಲಸ' ಎಂದು 35ರ ಹರೆಯದ ಪಟೇಲ್ ಹೇಳಿದ್ದಾರೆ.
ದೇಶೀಯ ಕ್ರಿಕೆಟ್ ನಲ್ಲಿ ಮುನಾಫ್ ಪಟೇಲ್ 2003ರಲ್ಲಿ ರಾಜ್ಕೋಟ್‌ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ಎ ತಂಡದ ಪರ ಚೊಚ್ಚಲ ಪಂದ್ಯ ಆಡಿದ್ದರು. ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಪಂದ್ಯ ಆಡುವ ಅವಕಾಶ ಪಡೆದಿದ್ದರು. 2006ರ ಮಾರ್ಚ್ ನಲ್ಲಿ ಆಫ್ರಿಕಾದ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಒಂದು ತಿಂಗಳ ಬಳಿಕ ಏಕದಿನ ಕ್ರಿಕೆಟ್ ಗೆ ಕಾಲಿಟ್ಟರು. ಪಟೇಲ್ ಅವರ ವೃತ್ತಿಜೀವನ ಗಾಯದ ಸಮಸ್ಯೆಯಿಂದ ಆವೃತವಾಗಿತ್ತು. ಹೀಗಾಗಿ ಅವರು ಕೇವಲ 13 ಟೆಸ್ಟ್ ಹಾಗೂ 70 ಏಕದಿನ ಪಂದ್ಯಗಳನ್ನು ಆಡಿದ್ದರು. 2011ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. 2011ರಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಿದ್ದರು.
ಮುನಾಫ್ ವೃತ್ತೀ ಜೀವನದ ಅದ್ಬುತ ಓವರ್!
2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಅಮೋಘ ಬೌಲಿಂಗ್ ಮಾಡುವ ಮೂಲಕ ಮುನಾಫ್ ಎಲ್ಲರ ಗಮನ ಸೆಳೆದಿದ್ದರು. ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಅಗತ್ಯವಿತ್ತು. ಮೊದಲ 3 ಎಸೆತಗಳಲ್ಲಿ 9 ರನ್ ಗಳಿಸಿ ಗೆಲುವಿನತ್ತ ಮುನ್ನಡೆದಿತ್ತು. ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ಗೆ 2 ರನ್ ಅಗತ್ಯವಿತ್ತು. ಕೇವಲ 1 ರನ್ ನೀಡಿದ ಮುನಾಫ್ ಪಂದ್ಯ ಟೈನಲ್ಲಿ ಕೊನೆಗೊಳ್ಳಲು ಕಾರಣರಾದರು. 2011ರ ವಿಶ್ವಕಪ್ ನಲ್ಲಿ ಮುನಾಫ್ ಒಟ್ಟು 11 ವಿಕೆಟ್‌ಗಳನ್ನು ಪಡೆದು ಜಹೀರ್ ಖಾನ್ ಹಾಗೂ ಯುವರಾಜ್ ಸಿಂಗ್ ಬಳಿಕ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಮೂರನೇ ಆಟಗಾರ ಎನಿಸಿಕೊಂಡಿದ್ದರು.