ಕ್ರಿಕೆಟ್

ಬರೊಬ್ಬರಿ 13 ನೋ ಬಾಲ್ ಹಾಕಿದರೂ ಅಂಪೈರ್ ಗೆ ಗೊತ್ತಾಗಲೇ ಇಲ್ಲ!

Srinivasamurthy VN
ಕೊಲಂಬೊ: ಪಂದ್ಯವೊಂದರಲ್ಲಿ ಬೌಲರ್ ಗಳು ಎಸೆದ ಬರೊಬ್ಬರಿ 13 ನೋಬಾಲ್ ಗಳನ್ನು ಗುರುತಿಸುವಲ್ಲಿ ಅಂಪೈರ್ ಗಳು ವಿಫಲರಾಗಿ ಇದೀಗ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಬೌಲರ್ ಗಳು ಎಸೆದ ಬರೊಬ್ಬರಿ 13 ನೋಬಾಲ್ ಗಳನ್ನು ಗುರುತಿಸುವಲ್ಲಿ ಅಂಪೈರ್ ಗಳು ವಿಫಲರಾಗಿದ್ದು, ಇದು ಕ್ರಿಕೆಟ್ ಆಟಗಾರರ ಟೀಕೆಗೆ ಕಾರಣವಾಗಿದೆ. ಪ್ರಮುಖವಾಗಿ ಶ್ರೀಲಂಕಾದ ಲಕ್ಷನ್ ಸಂದಕನ್ ಅವರು ಹೆಚ್ಚು ಬಾರಿ ನೋಬಾಲ್ ಎಸೆದಿದ್ದು, ಆ ಮೂಲಕ ಅವರು ನೋಬಾಲ್ ಎಕ್ಸ್ ಪರ್ಟ್ ಅನ್ನೋ ಕುಖ್ಯಾತಿಗೆ ಗುರಿಯಾಗಿದ್ದಾರೆ.
ಸಂದಕನ್ ಬರೋಬ್ಬರಿ 13 ನೋಬಾಲ್ ಹಾಕಿದ್ದಾರೆ. ಆದರೆ ಅಂಪೈರ್ ಗೆ ಮಾತ್ರ ಗೊತ್ತೇ ಆಗಲಿಲ್ಲ. ಮೈದಾನದಲ್ಲಿ ಅಳವಡಿಸಿರುವ ಕ್ಯಾಮೆರದಲ್ಲಿ ಇದು ಸೆರೆಯಾಗಿದೆ. ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಎರಡು ಬಾರಿ ಔಟಾದಾಗ ಅದು ನೋ ಬಾಲ್ ಆಗಿತ್ತು. ಇದು ರಿವ್ಯೂವ್ ಅಂಪೈರ್ ಪರೀಕ್ಷಿಸಿ ಬಳಿಕ ನಾಟೌಟ್ ಎಂದು ತೀರ್ಪು ನೀಡಿದ್ದರು. ಹೀಗಾಗಿ ಸ್ಟೋಕ್ಸ್ ಬಚಾವ್ ಆಗಿದ್ದರು.
ಸಂದಕನ್ ಪದೇ ಪದೇ ಲಕ್ಷ್ಮಣ ಗೆರೆ ದಾಟುತ್ತಿದ್ದರೂ ಅಂಪೈರ್‌ ಗಮನಹರಿಸಲಿಲ್ಲ. ದಿನದಾಟದಲ್ಲಿ ಸಂದಕನ್ ಶೇಕಡಾ 40 ರಷ್ಟು ಎಸೆತಗಳು ನೋ ಬಾಲ್ ಆಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲೂ ಸಂದಕನ್ ನೋ ಬಾಲ್ ಭಾರಿ ಚರ್ಚೆಯಾಗಿದೆ. ಟಿವಿ ರಿಪ್ಲೇನಲ್ಲಿ ಸಂದಕನ್ ನೋಬಾಲ್ ಎಸೆದದ್ದು ಸ್ಪಷ್ಟವಾಗಿದ್ದರೂ, ಪದೇ ಪದೇ ಅಂಪೈರ್ ಗಳ ತಪ್ಪು ಪುನರಾವರ್ತನೆಯಾಗುತ್ತಿದ್ದುದು ಇದೀಗ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 
ಈ ಬಗ್ಗೆ 3ನೇ ದಿನದಾಟ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ಉಪನಾಯಕ ಜಾಸ್ ಬಟ್ಲರ್ ಇನ್ನು ಮುಂದೆ ನೋಬಾಲ್ ಪರೀಕ್ಷೆಗೂ ನಾವು ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಬೇಕಾಗುತ್ತದೆ ಎಂದು ಅಂಪೈರ್ ಗಳ ವಿರುದ್ಧ ಪರೋಕ್ಷ ಕಿಡಿಕಾರಿದ್ದಾರೆ. ಅಲ್ಲದೆ ಈ ಬಗ್ಗೆ ಐಸಿಸಿ ಸೂಕ್ತ ಮಾನದಂಡ ಜಾರಿಗೆ ತರಬೇಕು. ನೋಬಾಲ್ ಗಳಿಂದ ಪಂದ್ಯದ ಗತಿಯೇ ಬದಲಾಗಿ ಹೋಗುತ್ತದೆ ಎಂದು ಹೇಳಿದ್ದಾರೆ.
SCROLL FOR NEXT