ಕ್ರಿಕೆಟ್

ಕಳಪೆ ಫಾರ್ಮ್ ಎಂಎಸ್ ಧೋನಿಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಅಥವಾ ಕೊಕ್?

Vishwanath S
ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಗುರುವಾರ ಘೋಷಿಸಲಿದ್ದು ಕಳಪೆ ಫಾರ್ಮ್ ನಲ್ಲಿರುವ ಎಂಎಸ್ ಧೋನಿಗೆ ವಿಶ್ರಾಂತಿ ಅಥವಾ ಕೊಕ್ ಕೊಡುವ ಸಾಧ್ಯತೆ ಇದೆ. 
ಕಳೆದ ಏಷ್ಯಾ ಕಪ್ ಟೂರ್ನಿಯಲ್ಲೂ 37ರ ಹರೆಯದ ಎಂಎಸ್ ಧೋನಿ ಬ್ಯಾಟಿಂಗ್ ನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದರು. ಅಲ್ಲದೆ ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಧೋನಿಗೆ ವಿಶ್ರಾಂತಿ ಸೂಚಿಸುವ ಸಾಧ್ಯತೆಯಿದೆ. ಇನ್ನು ವಿಶ್ರಾಂತಿ ಹೆಸರಲ್ಲಿ ತಂಡದಿಂದ ದೂರವಿಡುವ ಮೂಲಕ ಯುವ ಆಟಗಾರರಿಗೆ ಅವಕಾಶವನ್ನು ನೀಡುವ ಸಾಧ್ಯತೆ ಹೆಚ್ಚಿದೆ. 
ಇನ್ನು ಧೋನಿಯನ್ನು ತಂಡದಲ್ಲಿರಿಸಿಕೊಂಡು ಬ್ಯಾಕ್ ಅಪ್ ಆಟಗಾರನಾಗಿ ಹೆಚ್ಚುವರಿ ವಿಕೆಟ್ ಕೀಪರ್ ಘೋಷಿಸುವ ಸಾಧ್ಯತೆಯಿದೆ. ಇದೇ ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ತಂಡವನ್ನು ಸೇರಿಕೊಳ್ಳಲಿದ್ದಾರೆ. 
ವಿಶ್ವಕಪ್ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಟೀಂ ಇಂಡಿಯಾ ಗುರಿಯಾಗಲಿದೆ. ಫಿನಿಶರ್ ಎನಿಸಿಕೊಳ್ಳುವಲ್ಲಿ ವಿಫಲವಾಗುತ್ತಿರುವುದು ದಿನೇಶ್ ಕಾರ್ತಿಕ್ ಹಾಗೂ ಅಂಬಟಿ ರಾಯುಡು ಅವರಿಗೆ ಹಿನ್ನಡೆಯಾಗಲಿದೆ. ಕನ್ನಡಿಗ ಮನೀಷ್ ಪಾಂಡೆ ಅವರಿಗೂ ಕತ್ತರಿ ಪ್ರಯೋಗವಾಗುವ ಭೀತಿಯಿದೆ. 
ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಐದು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
SCROLL FOR NEXT