ಕ್ರಿಕೆಟ್

ಅಂಕಿ-ಅಂಶ: ಪಾಕ್ ವಿರುದ್ಧ ಭಾರತಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೆಲುವು!

Srinivasamurthy VN
ದುಬೈ: ಸಾಂಪ್ರದಾಯಿಕ ಎದುರಾಳಿಗಳಿಗೆ ಟೀಂ ಇಂಡಿಯಾ ಮತ್ತೊಂದು ಸೋಲಿನ ರುಚಿ ತೋರಿಸಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ.
ಹೌದು.. ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್ 2018 ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 9 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ. ಈ ಹಿಂದೆ ಪಾಕಿಸ್ತಾನದ ವಿರುದ್ಧ ಭಾರತ ಇಷ್ಟು ದೊಡ್ಡ ಅಂತರದಲ್ಲಿ ಗೆದ್ದೇ ಇರಲಿಲ್ಲ. ಇತ್ತೀಚೆಗೆ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ 8 ವಿಕೆಟ್ ಗಳ ಅಂತರದಲ್ಲಿ ಗೆದ್ದಿತ್ತು. ಎಸೆತಗಳು ಬಾಕಿ ಉಳಿಸಿ ಗೆದ್ದ ಅಂಕಿ ಅಂಶಗಳ ಅನ್ವಯ ಆ ಪಂದ್ಯದಲ್ಲಿ ಸಿಕ್ಕ ಗೆಲುವು ದೊಡ್ಡದಾದರೆ ಅದಕ್ಕಿಂತಲೂ ಮಿಗಿಲಾಗಿ ಅತೀ ಹೆಚ್ಚು ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಿದ ಅಂಕಿಅಂಶಗಳ ಪೈಕಿ ನಿನ್ನೆ ಸಿಕ್ಕ ಗೆಲುವು ಭಾರತಕ್ಕೆ ದೊಡ್ಡ ಗೆಲುವು ಎಂದು ತಜ್ಞರು ಬಣ್ಣಿಸಿದ್ದಾರೆ.
ನಿನ್ನೆಯ ಪಂದ್ಯ ಭಾರತಕ್ಕೆ ಪಾಕ್ ವಿರುದ್ಧ ಸಿಕ್ಕ ಅತ್ಯಂತ ದೊಡ್ಡ ಗೆಲುವು ಎನ್ನಲು ಮತ್ತೊಂದು ಕಾರಣ ಎಂದರೆ ಭಾರತ 9 ವಿಕೆಟ್ ಗಳಿಂದ ಮಾತ್ರವಲ್ಲದೇ ಇನ್ನೂ 63 ಎಸೆತಗಳು ಬಾಕಿ ಇರುವಂತೆ ಜಯ ತನ್ನದಾಗಿಸಿಕೊಂಡಿತ್ತು. ಈ ಹಿಂದೆ ಇದೇ ದುಬೈನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಇನ್ನೂ 126 ಎಸೆತಗಳು ಬಾಕಿ ಇರುವಂತೆ ಗೆದ್ದಿತ್ತು, ಅತೀ ಹೆಚ್ಚು ಎಸೆತಗಳು ಬಾಕಿ ಇರುವಂತೆ ಗೆದ್ದ ಪಂದ್ಯಗಳ ಪಟ್ಟಿಯಲ್ಲಿ ಆ ಗೆಲುವು ಅಗ್ರ ಸ್ಥಾನ ಪಡೆದರೆ, ನಿನ್ನೆ ಸಿಕ್ಕ ಗೆಲುವು ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಈ ಹಿಂದೆ 2006ರಲ್ಲಿ ಮುಲ್ತಾನ್ ನಲ್ಲಿ ಭಾರತ 105 ಎಸೆತ ಬಾಕಿ ಇರುವಂತೆ ಗೆದ್ದಿತ್ತು. ಅದು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆ ಬಳಿಕ ಟೊರ್ಯಾಂಟೋದಲ್ಲಿ 1997ರಲ್ಲಿ 92 ಎಸೆತ ಬಾಕಿ ಇರುವಂತೆ ಗೆದ್ದಿತ್ತು, ಇದು ಮೂರನೇ ಸ್ಥಾನದಲ್ಲಿದೆ.
SCROLL FOR NEXT