ಕ್ರಿಕೆಟ್

ಏನಾಯ್ತು ಮಿಸ್ಟರ್ ಕೂಲ್ ಕ್ಯಾಪ್ಟನ್‌ಗೆ: ಮಾಹೀ ವಿರುದ್ಧ ಹಿರಿಯ ಕ್ರಿಕೆಟಿಗರು ಕಿಡಿಕಾರಿದ್ದೇಕೆ?

Vishwanath S
ಜೈಪುರ: ರಾಜಸ್ಥಾನ್‌ ರಾಯಲ್ಸ್ ವಿರುದ್ಧದ 25ನೇ ಪಂದ್ಯದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಕೂಲ್‌ ಕ್ಯಾಪ್ಟನ್‌ ಎಂದು ಖ್ಯಾತಿ ಗಳಿಸಿರುವ ಮಹೇಂದ್ರ ಸಿಂಗ್‌ ಧೋನಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ತಾಳ್ಮೆ ಕಳೆದುಕೊಂಡರು. ಈ ಬಗ್ಗೆ ಕ್ರಿಕೆಟ್‌ ದಿಗ್ಗಜರು ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಧೋನಿ ನಡೆಯನ್ನು ವಿರೋಧಿಸಿದ್ದಾರೆ.  
ಜೈಪುರದ ಸವಾಯಿ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ 12ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿದ್ದ 152 ರನ್‌ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಂತಿಮ ಓವರ್‌ನಲ್ಲಿ 18 ರನ್‌ ಅಗತ್ಯವಿತ್ತು. 20ನೇ ಓವರ್‌ ಬೌಲಿಂಗ್‌ ಮಾಡಿದ ಬೆನ್‌ ಸ್ಟೋಕ್ಸ್‌, ಮೊದಲನೇ ಎಸೆತದಲ್ಲೇ ಜಡೇಜಾರಿಂದ ಸಿಕ್ಸರ್‌ ಬಾರಿಸಿಕೊಂಡರು. ಎರಡನೇ ಎಸೆತ ನೋಬಾಲ್‌, ಪ್ರೀ ಹಿಟ್‌ ಎಸೆತದಲ್ಲಿ ಚೆನ್ನೈ ಎರಡು ರನ್‌ ತೆಗೆದುಕೊಳ್ಳುತ್ತದೆ. 
ಮೂರನೇ ಎಸೆತದಲ್ಲಿ ಧೋನಿ ಕ್ಲೀನ್‌ ಬೌಲ್ಡ್‌ ಆಗುತ್ತಾರೆ. ಈ ವೇಳೆ ಚೆನ್ನೈ ಗೆಲುವಿಗೆ ಮೂರು ಎಸೆತದಲ್ಲಿ 9 ರನ್ ಅಗತ್ಯವಿತ್ತು. ನಾಲ್ಕನೇ ಎಸೆತದಲ್ಲಿ ಸ್ಯಾಂಟ್ನರ್‌ ಎರಡು ರನ್‌ ಗಳಿಸುತ್ತಾರೆ. ಆದರೆ, ಈ ಎಸೆತವನ್ನು ಸ್ಟ್ರೈಟ್‌ ಅಂಪೈರ್‌ ನೋ ಬಾಲ್‌ ಎಂದು ಕರೆ ನೀಡುತ್ತಾರೆ. ಆದರೆ, ಲೆಗ್ ಅಂಪೈರ್‌ ನೋಬಾಲ್‌ ಇಲ್ಲವೆಂದು ಹೇಳಿದ ಬಳಿಕ ಸ್ಟ್ರೈಟ್‌ ಅಂಪೈರ್‌ ನೋ ಬಾಲ್‌ ಕರೆಯನ್ನು ಹಿಂದಕ್ಕೆ ಪಡೆಯುತ್ತಾರೆ. 
ಈ ವೇಳೆ ಮೈದಾನದ ಹೊರಗಡೆ ಇದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌ ಧೋನಿ ತೀರ್ಪುಗಾರರ ಬಳಿ ಆಗಮಿಸಿ ತೀವ್ರ ವಾಗ್ವಾದಕ್ಕೆ ಇಳಿಯುತ್ತಾರೆ. ಧೋನಿ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ತಾಳ್ಮೆ ಕಳೆದುಕೊಂಡು ತೀರ್ಪುಗಾರರ ಮೇಲೆ ಕಿಡಿಕಾರಿದರು. ಈ ಕುರಿತು ಹಲವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಮಹೇಂದ್ರ ಸಿಂಗ್‌ ಧೋನಿಯವರ ದೊಡ್ಡ ಅಭಿಮಾನಿ. ಆದರೆ, ಅವರು ಕಳೆದ ಪಂದ್ಯದಲ್ಲಿ ನಿಯಂತ್ರಣ ಕಳೆದುಕೊಂಡು ವರ್ತಿಸಿದ್ದರು. ಆದಾಗ್ಯೂ ಅವರ ಮೇಲೆ ಸಣ್ಣ ಪ್ರಮಾಣದ ದಂಡ ವಿಧಿಸಿರುವುದು ಅವರ ಅದೃಷ್ಠ” ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್‌ ಮಂಜೇರ್ಕರ್‌ ಟ್ವಿಟ್‌ ಮಾಡಿದ್ದಾರೆ.
“ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತೀರ್ಪುಗಾರರ ಸೇವೆ ಕಳಪೆಯಾಗಿದೆ ಎನ್ನುವುದಕ್ಕೆ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿನ ಘಟನೆಯೇ ಸಾಕ್ಷಿ. ತೀರ್ಪುಗಾರರು ನೋಬಾಲ್‌ ಎಂದು ತೀರ್ಪು ನೀಡಿ ನಂತರ ವಾಪಾಸ್ಸು ಪಡೆದುಕೊಂಡರು. ಈ ವೇಳೆ, ಔಟ್‌ ಆಗಿದ್ದ ಚೆನ್ನೈ ತಂಡದ ನಾಯಕ ಧೋನಿ ಮತ್ತೊಮ್ಮೆ ಕ್ರೀಸ್‌ ಬಳಿ ತೆರಳಲು ಸ್ವಾತಂತ್ರವಿರಲಿಲ್ಲ. ಆದರೂ ಕಾನೂನು ಉಲ್ಲಂಘಿಸಿ ತೆರಳಿದ್ದರು. ಧೋನಿ ಅವರ ನಡೆ ಸರಿಯಲ್ಲ” ಎಂದು ಭಾರತದ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಟ್ವಿಟ್‌ ಮಾಡಿದ್ದಾರೆ.
“ಇಂಥ ನಡುವಳಿಕೆ ಕ್ರೀಡೆಗೆ ಒಳ್ಳೆಯದಲ್ಲ. ಔಟ್ ಆದ ಬಳಿಕ ಪಿಚ್‌ ಬಳಿ ತೆರಳಲು ಯಾವುದೇ ನಾಯಕರಿಗೂ ಅವಕಾಶವಿರುವುದಿಲ್ಲ” ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಟ್ವಿಟ್‌ ಮಾಡಿದ್ದಾರೆ.
ಕಾನೂನು ಉಲ್ಲಂಘನೆ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿಯವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 50 ರಷ್ಟು ದಂಡ ವಿಧಿಸಲಾಗಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 4 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಧೋನಿ 43 ಎಸೆತಗಳಲ್ಲಿ 58 ರನ್‌ ಗಳಿಸಿದ್ದರು. 
ಆರ್‌ಆರ್ ವಿರುದ್ಧದ ಪಂದ್ಯದ ಗೆಲುವಿನೊಂದಿಗೆ ಐಪಿಎಲ್‌ ಇತಿಹಾಸದಲ್ಲೇ 100 ಪಂದ್ಯಗಳಲ್ಲಿ ಜಯ ಸಾಧಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಧೋನಿ ಭಾಜನರಾದರು. 12 ಅಂಕಗಳೊಂದಿಗೆ ಸಿಎಸ್‌ಕೆ ಗುಂಪು ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ. ಏ.14ರಂದು ಕೊಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಈಡೆನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಸೆಣಸಲಿದೆ.
SCROLL FOR NEXT