ಕ್ರಿಕೆಟ್

ವಿಶ್ವಕಪ್ ತಂಡದ ಕುರಿತು ಅಂಬಾಟಿ ರಾಯುಡು ವ್ಯಂಗ್ಯಾತ್ಮಕ ಟ್ವೀಟ್, ಬಿಸಿಸಿಐ ಹೇಳಿದ್ದೇನು?

Srinivasamurthy VN
ನವದೆಹಲಿ: 2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಾಟಿ ರಾಯುಡು ಅವರು ಆಯ್ಕೆ ಸಮಿತಿ ವಿರುದ್ಧ ವ್ಯಂಗ್ಯವಾಡಿ ಮಾಡಿದ್ದ ಟ್ವೀಟ್‍ಗೆ  ಬಿಸಿಸಿಐ ಸಮಿತಿ ಪ್ರತಿಕ್ರಿಯೆ ನೀಡಿದೆ.
ಅಂಬಾಟಿ ರಾಯುಡು ವಿಶ್ವಕಪ್ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಸ್ಥಾನ ಖಚಿತವೆಂದೇ ಭಾವಿಸಿದ್ದರು. ಆದರೆ ಆಯ್ಕೆ ಸಮಿತಿ ಅವರನ್ನು ಕೈ ಬಿಟ್ಟು ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರಾಯುಡು, ವಿಶ್ವಕಪ್ ನೋಡಲು 3ಡಿ ಗ್ಲಾಸ್ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿ ಪರೋಕ್ಷವಾಗಿ ಆಯ್ಕೆ ಸಮಿತಿಗೆ ಟಾಂಗ್ ನೀಡಿದ್ದರು. ಈ ವಿಚಾರ ವ್ಯಾಪಕ ವೈರಲ್ ಆಗಿ, ಅಂಬಾಟಿ ರಾಯುಡು ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.
ಇದೀಗ ಇದೇ ವಿಚಾರವಾಗಿ ಬಿಸಿಸಿಐ ಪ್ರತಿಕ್ರಿಯೆ ನೀಡಿದ್ದು, ನಮಗೆ ರಾಯುಡು ಭಾವನೆ ಅರ್ಥವಾಗುತ್ತದೆ, ಆದರೆ ಭಾವೋದ್ವೇಗಕ್ಕೆ ಒಳಗಾಗಿ ಇತಿಮಿತಿ ಮೀರಬಾರದು ಸಲಹೆ ನೀಡಿದೆ.
ರಾಯುಡು ಟ್ವೀಟ್‍ ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೊಬ್ಬರು, ನಮಗೆ ರಾಯುಡು ಅವರ ಭಾವನೆ ಆರ್ಥವಾಗುತ್ತದೆ. ಅವರ ಟ್ವೀಟ್ ಅನ್ನು ನೋಟ್ ಮಾಡಿದ್ದೇವೆ. ಇತಿಮಿತಿಯನ್ನ ಮೀರದೆ ತಮ್ಮ ಭಾವೋದ್ವೇಗವನ್ನು ಹಂಚಿಕೊಳ್ಳುವ ಅನಿವಾರ್ಯತೆ ರಾಯುಡು ಅವರ ಮೇಲಿದೆ. ಇದರಿಂದ ಹೊರಕ್ಕೆ ಬರಲು ಅವರಿಗೆ ಕೆಲ ಸಮಯ ಬೇಕಾಗುತ್ತದೆ. ಈಗಾಗಲೇ ಅವರು ಸ್ಟಾಂಡ್ ಬೈ ಆಟಗಾರರಾಗಿದ್ದು, ತಂಡದಲ್ಲಿ ಆಟಗಾರರು ಗಾಯಗೊಂಡರೆ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಸದ್ಯ ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.
SCROLL FOR NEXT