ಕ್ರಿಕೆಟ್

ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಗೆಲುವು ಸುಲಭವಲ್ಲ: ಪಾರ್ಥಿವ್‌ ಪಟೇಲ್‌

Lingaraj Badiger
ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯುವುದಿಲ್ಲ ಎಂದು ರಾಯಲ್‌ ಚಾಲೆಂಜರ್ಸ್‌ ತಂಡದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಅವರು ಹೇಳಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಥ ಕ್ಲಿಷ್ಟ ಸಂದರ್ಭವಿದ್ದರೂ ಧೋನಿ ಕ್ರೀಸ್‌ನಲ್ಲಿದ್ದರೆ ಪಂದ್ಯ ಸುಲಭವಾಗಿ ಮುಗಿಯುವುದಿಲ್ಲ ಎಂದರು.
ಭಾನುವಾರ ನಡೆದ ಐಪಿಎಲ್‌ 39ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ 26 ರನ್‌ ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಧೋನಿ ಐದು ಎಸೆತಗಳಲ್ಲಿ 24 ರನ್‌ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಎರಡು ರನ್‌ ಬೇಕಾದಾಗ ಚೆಂಡನ್ನು ಮುಟ್ಟುವಲ್ಲಿ ವಿಫಲರಾದರು. ಅಂತಿಮವಾಗಿ ಕೇವಲ ಒಂದು ರನ್‌ನಿಂದ ಆರ್‌ಸಿಬಿ ಗೆಲುವು ಪಡೆಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಟೇಲ್‌, ಧೋನಿ ಕೊನೆಯ ಎಸೆತವನ್ನು ಹೊಡೆಯುವಲ್ಲಿ ವಿಫಲರಾಗುತ್ತಾರೆಂದು ಭಾವಿಸಿರಲಿಲ್ಲ. ಕೊನೆಯ ಎಸೆತವನ್ನು ಅವರು ಆಫ್‌ ಸೈಡ್‌ ಹೊಡೆಯಲು ಯೋಜನೆ ರೂಪಿಸಿದ್ದೆವು. ಅದರಂತೆ ಉಮೇಶ್‌ ಯಾದವ್‌ ಆಫ್‌ ಸೈಡ್ ಚೆಂಡನ್ನು ಎಸೆದಿದ್ದರು. ಆದರೆ, ಚೆಂಡನ್ನು ಹೊಡೆಯುವಲ್ಲಿ ಧೋನಿ ವಿಫಲರಾಗಿದ್ದರು. ಒಂದು ವೇಳೆ ಧೋನಿ ಎಡ ಭಾಗ ಚೆಂಡನ್ನು ಆಡಿದ್ದರೆ ಸುಲಭವಾಗಿ ಎರಡು ರನ್‌ ಗಳಿಸುವುದನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೈನ್‌ ಬಗ್ಗೆ ಮಾತನಾಡಿ, ಡೇಲ್ ಸ್ಟೈನ್‌ ಬೌಲಿಂಗ್ ಅದ್ಭುತವಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್‌ ಪರ ಅವರು ಆಡುವಾಗ ಈ ರೀತಿಯ ಬೌಲಿಂಗ್‌ ನೋಡಿದ್ದೆ. ಅದೇ ರೀತಿ ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಿದ್ದಾರೆ ಎಂದರು.
ಪಾರ್ಥಿವ್‌ ಪಟೇಲ್‌ 36 ಎಸೆತಗಳಲ್ಲಿ 53 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆರ್‌ಸಿಬಿ ಏ. 24 ರಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಇದೇ ಮೈದಾನದಲ್ಲಿ ಸೆಣಸಲಿದೆ.
SCROLL FOR NEXT