ಕ್ರಿಕೆಟ್

ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಬಿಸಿಸಿಐನಿಂದ ಜಡೇಜಾ, ಬೂಮ್ರಾ, ಪೂನಂ ಯಾದವ್ ಹೆಸರು ಶಿಫಾರಸು

Nagaraja AB

ಮುಂಬೈ: ಈ ಬಾರಿಯ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಟೀಂ ಇಂಡಿಯಾದ ಆಟಗಾರರಾದ ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಹಾಗೂ ಪೂನಮ್ ಯಾದವ್ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ.

 ಕ್ರೀಡಾರಂಗದಲ್ಲಿ  ಗಣನೀಯವಾಗಿ  ಸಾಧನೆ ಮಾಡಿರುವವರನ್ನು ಗುರುತಿಸಿ ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವಾಲಯದಿಂದ ಈ ಪ್ರಶಸ್ತಿ ನೀಡಲಾಗುತ್ತದೆ.

ಭಾರತೀಯ  ಟೆಸ್ಟ್ ಕ್ರಿಕೆಟಿನಲ್ಲಿ ಪ್ರಮುಖ ಆಟಗಾರರಾಗಿರುವ ಜಡೇಜಾ 41 ಪಂದ್ಯಗಳನ್ನು ಆಡಿದ್ದು, 192 ವಿಕೆಟ್ ಕಬಳಿಸಿದ್ದಾರೆ. ಇತ್ತೀಚಿಗೆ ನಿಗದಿತ ಒವರ್ ಗಳ ಕ್ರಿಕೆಟ್ ನಲ್ಲೂ ಬೌಲಿಂಗ್ ಮಾಡುತ್ತಿರುವ ಜಡೇಜಾ ಇಂಗ್ಲೆಂಡ್  ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯ 15 ಮಂದಿಯ ಟೀಂ ಇಂಡಿಯಾ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ. ವಿಶ್ವಕಪ್ ಪಂದ್ಯಾವಳಿಯಲ್ಲಿ  ಇವರಿಬ್ಬರ ಬೌಲಿಂಗ್ ಪ್ರಮುಖವಾಗಲಿದೆ. 25 ವರ್ಷದ ಬೂಮ್ರಾ ಐಸಿಸಿ ಏಕದಿನ ಪಂದ್ಯದ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಈ ಮಧ್ಯೆ ಪೂನಂ ಯಾದವ್ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.  ಭಾರತದ ಪರ 41 ಏಕದಿನ ಹಾಗೂ 54 ಟಿ- 20 ಪಂದ್ಯಗಳನ್ನಾಡಿದ್ದಾರೆ.
SCROLL FOR NEXT