ಕ್ರಿಕೆಟ್

3ನೇ ಏಕದಿನ ಪಂದ್ಯ: ಭಾರತಕ್ಕೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿದ ವಿಂಡೀಸ್!

Srinivasamurthy VN

ಮಳೆಯಿಂದಾಗಿ ತಲಾ 35 ಓವರ್ ಗಳಿಗೆ ಕಡಿತಗೊಂಡ ಪಂದ್ಯ, ಭಾರತಕ್ಕೆ ಕಠಿಣ ಸವಾಲು

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಲಾಗಿದೆ.

ಮಳೆಯಿಂದಾಗಿ ತಲಾ 35 ಓವರ್ ಗಳಿಗೆ ಪಂದ್ಯವನ್ನು ಕಡಿತಗೊಳಿಸಲಾಗಿದ್ದು, ಅಂತೆಯೇ ಭಾರತಕ್ಕೆ ಗೆಲ್ಲಲು 255ರನ್ ಗಳ ಗುರಿಯನ್ನು ನಿಗದಿ ಪಡಿಸಲಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 35 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಆರಂಭಿಕರಾದ ಕ್ರಿಸ್ ಗೇಯ್ಲ್ (72 ರನ್) ಮತ್ತು ಎವಿನ್ ಲೂಯಿಸ್ (43 ರನ್) ರನ್ ಗಳಿಸಿ ವಿಂಡೀಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (30 ರನ್), ಶಿಮ್ರಾನ್ ಹೇಟ್ಮರ್ (25 ರನ್), ಜೇಸನ್ ಹೋಲ್ಡರ್ (14 ರನ್) ಮತ್ತು ಕಾರ್ಲೋಸ್ ಬ್ರಾಥ್ ವೇಟ್ (16 ರನ್) ಗಳಿಸಿ ವಿಂಡೀಸ್ ತಂಡ 200ರ ಗಡಿ ದಾಟಲು ನೆರವಾದರು.

ಇತ್ತ ಭಾರತದ ಪರ ಖಲೀಲ್ ಅಹ್ಮದ್ 3 ವಿಕೆಟ್ ಕಬಳಿಸಿದರೆ, ಮಹಮದ್ ಶಮಿ 2 ವಿಕೆಟ್ ಪಡೆದರು. ಚಹಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ವಿಂಡೀಸ್ ತಂಡ 35 ಓವರ್ ನಲ್ಲಿ 240 ರನ್ ಗಳಿಸಿದರು. ಡಕ್ವರ್ಥ್ ಲೂಯಿಸ್ ನಿಯಮದ ಅನುಸಾರ ಭಾರತಕ್ಕೆ ಅಂಪೈರ್ ಗಳು ಗುರಿಯನ್ನು 255ರನ್ ಗಳಾಗಿ ಮಾರ್ಪಡಿಸಿದರು. 

ಹೀಗಾಗಿ ಭಾರತ ತಂಡ 35 ಓವರ್ ನಲ್ಲಿ 255ರನ್ ಗಳಿಸಬೇಕಿದೆ. ಪ್ರಸ್ತುತ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡ 2 ಓವರ್ 20 ರನ್ ಗಳಿಸಿದೆ.

SCROLL FOR NEXT