ಕ್ರಿಕೆಟ್

ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬದಲಿಗೆ ವಿಕ್ರಮ್ ರಾಥೋಡ್  ಆಯ್ಕೆ ಸಾಧ್ಯತೆ 

Nagaraja AB

ಚೆನ್ನೈ: ಮುಂಬೈಯ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿ ಆಯ್ಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಗುರುವಾರದವರೆಗೂ ಮುಂದುವರೆಯಲಿದೆ.

ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್  ಜೊತೆಗೆ ಇನ್ನಿತರ ಆಯ್ಕೆದಾರರು ಸಂದರ್ಶನ ನಡೆಸಲಿದ್ದಾರೆ. ಆಡಳಿತಾತ್ಮಕ ಮ್ಯಾನೇಜರ್ ಹುದ್ದೆಗೂ ಸಂದರ್ಶನ ನಡೆಯಲಿದೆ. 

ಈ ಮಧ್ಯೆ ಬೌಲಿಂಗ್ ಕೋಚ್ ಭಾರತಿ ಅರುಣ್ ತಮ್ಮ ಹುದ್ದೆಯನ್ನು ಪುನರ್ ಪಡೆಯುವ ಸಾಧ್ಯತೆ ಇದೆ. ಆದರೆ, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬದಲಾವಣೆಯಾಗುವುದು ಬಹುತೇಕ ನಿಶ್ಚಯವಾಗಿದೆ. ಭಾರತಿ ಅರುಣ್  ಅವರ ಮಾರ್ಗದರ್ಶನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಬೌಲರ್ ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅಲ್ಲದೇ ಅವರಿಗೆ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಬೆಂಬಲವೂ ಇದೆ.  ಅರುಣ್ ಅವರಿಗೆ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ , ಡರೇನ್ ಗೂಗ್, ಮತ್ತು ಸುನೀಲ್ ಜೋಷಿ ಪ್ರತಿಸ್ಪರ್ಧಿಗಳಾಗಿದ್ದಾರೆ. 

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಪದೇ ಪದೇ ವಿಫಲವಾಗುತ್ತಿದ್ದರೂ ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಜಯ್ ಬಂಗಾರ್ ವಿಫಲರಾಗಿದ್ದಾರೆ.  ಬಂಗಾರ್ ಬದಲಾಗಲಿದ್ದು, ಮಾಜಿ ಟೆಸ್ಟ್ ಆರಂಭಿಕ ಆಟಗಾರ ವಿಕ್ರಮ್ ರಾಠೋಡ್ ನೇಮಕಗೊಳ್ಳುವ ಸಾಧ್ಯತೆ ಇದೆ. 

 ಬ್ಯಾಟಿಂಗ್ ಕೋಚ್ ಹುದ್ದೆಗಾಗಿ  12 ಮಂದಿಯ ಕಿರುಪಟ್ಟಿಯಲ್ಲಿ ಪ್ರವೀಣ್ ಅಮ್ರೆ, ಅಮೊಲ್ ಮುಜೂಮ್ ದಾರ್, ಹೃಷಿಕೇಶಿ ಕಾನಿಟ್ಕರ್, ಶ್ರೀಲಂಕಾದ ತಿಲನ್ ಸಮರವೀರ ಮತ್ತು ಇಂಗ್ಲೆಂಡಿನ ಮಾಜಿ ಬ್ಯಾಟ್ಸ್ ಮನ್  ಜೊನಾಥನ್ ಟ್ರೊಠ್ ಮತ್ತು ಮಾರ್ಕ್ ರಾಮ್ ಪ್ರಕಾಶ್  ಇದ್ದಾರೆ. ಇನ್ನೂ ಫೀಲ್ಡಿಂಗ್ ಕೋಚ್ ಶ್ರೀಧರ್ ಅವರಿಗೆ ರವಿಶಾಸ್ತ್ರಿ ಅವರ ಬೆಂಬಲ ಇದೆ. ಆದರೆ, ಅವರಿಗೆ ಜಾಂಟಿ ರೊಡ್ಸ್ ತೀವ್ರ ಪೈಪೋಟಿ ನೀಡಲಿದ್ದಾರೆ.

SCROLL FOR NEXT