ಕ್ರಿಕೆಟ್

ರಹಾನೆ ಅರ್ಧ ಶತಕದ ನಡುವೆಯೂ ಭಾರತಕ್ಕೆ ಮೊದಲ ದಿನ ಹಿನ್ನಡೆ

Srinivasamurthy VN

ಅಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಪ್ರವಾಸಿ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ.

ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಮೊದಲ ದಿನದ ಮುಕ್ತಾಯಕ್ಕೆ 68.5 ಓವರ್‌ಗಳಿಗೆ ಆರು ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಭಾರತದ ಅಜಿಂಕ್ಯಾ ರಹಾನೆ (81 ರನ್‌, 163 ಎಸೆತಗಳು) ಅವರ ಅರ್ಧ ಶತಕದ ಹೊರತಾಗಿಯೂ ಕೇಮರ್‌ ರೋಚ್‌ (34ಕ್ಕೆ3) ಮಾರಕ ದಾಳಿಗೆ ನಲುಗಿದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ ಆರಂಭಿಕ ದಿನ ಹಿನ್ನಡೆ ಅನುಭವಿಸಿತು.

ಟಾಸ್‌ ಗೆದ್ದು ಮೊದಲು ಭಾರತಕ್ಕೆ ಬ್ಯಾಟಿಂಗ್‌ ಆಹ್ವಾನಿಸಿದ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅವರ ಯೋಜನೆ ಸಫಲವಾಯಿತು. ಇದಕ್ಕೆ ಕಾರಣವಾಗಿದ್ದು ಆರಂಭಿಕ ವೇಗಿ ಕೇಮರ್‌ ರೋಚ್‌ ಹಾಗೂ ಶನ್ನೋನ್‌ ಗ್ಯಾಬ್ರಿಯಲ್‌. ಇವರಿಬ್ಬರು ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್‌ ಕಬಳಿಸಿ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಿದರು.

ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ ತಂಡದ ಮೊತ್ತ ಐದು ರನ್‌ ಗಳಾಗಿದ್ದಾಗ ಕೆಮರ್ ರೋಚ್‌ ಗೆ ವಿಕೆಟ್ ಒಪ್ಪಿಸಿದರು. ಅವರ ಗಳಿಕೆ ಕೇವಲ ಐದು ರನ್ ಆಗಿತ್ತು. ಚೇತೇಶ್ವರ ಪೂಜಾರ ಕೇವಲ ಎರಡು ರನ್ ಗಳಿಸಿ ವಾಪಸಾದರು. ಈ ವಿಕೆಟ್ ಕೂಡ ಕೆಮರ್‌ ರೋಚ್ ಪಾಲಾಯಿತು. ಆ ಮೂಲಕ ಭಾರತ ತಂಡ ಆರಂಭಿಕ ಆಘಾಚ ಅನುಭವಿಸಿತು.

ಬಳಿಕ ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಾಗ ಭಾರತದ ಪಾಳಯದಲ್ಲಿ ಭರವಸೆ ಮೂಡಿತು. ಆದರೆ ಅವರೂ ಕೂಡ ಕೇವಲ ಒಂಬತ್ತು ರನ್ ಗಳಿಸಿ ಶಾನನ್ ಗೇಬ್ರಿಯಲ್‌ಗೆ ವಿಕೆಟ್ ನೀಡಿ ಹೊರನಡೆದರು. 25 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರಾಹುಲ್ ಮತ್ತು ಅಜಿಂಕ್ಯ ರಹಾನೆ ಆಸರೆಯಾದರು. ಈ ವೇಳೆ ರಾಹುಲ್ ಕೂಡ 44 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾಗ ಚೇಸ್ ವಿಕೆಟ್ ಒಪ್ಪಿಸಿದರು. ಬಳಿಕ ರಹಾನೆ ಕೂಡ 81 ರನ್ ಗಳಿಸಿ ಗೇಬ್ರಿಯಲ್ ಗೆ ಕ್ಲೀನ್ ಬೋಲ್ಡ್ ಆದರು. ರಾಹುಲ್ ಔಟಾದ ಬಳಿಕ ಬಂದ ಹನುಮ ವಿಹಾರಿ ವಿಂಡೀಸ್ ಬೌಲಿಂಗ್ ದಾಳಿಗೆ ಪ್ರತಿರೋಧ ತೋರಿದರೂ ಅವರ ಹೋರಾಟ 32 ರನ್ ಗಳಿಗೆ ಸೀಮಿತವಾಯಿತು. ಪ್ರಸ್ತುತ ರಿಷಬ್ ಪಂತ್ (20 ರನ್) ಹಾಗೂ ರವೀಂದ್ರ ಜಡೇಜಾ (3 ರನ್) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ. ವಿಂಡೀಸ್ ಪರ ಕೆಮರ್ ರೋಚ್ 3, ಗೇಬ್ರಿಯಲ್ 2 ಮತ್ತು ಚೇಸ್ 1 ವಿಕೆಟ್ ಪಡೆದರು.

SCROLL FOR NEXT