ಕ್ರಿಕೆಟ್

ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್: ರೋಹಿತ್-ಕೊಹ್ಲಿ ಜಂಟಿ ಅಗ್ರ ಸ್ಥಾನ

Srinivasamurthy VN

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಆರ್ಭಟಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನಕ್ಕೇರಿದ್ದಾರೆ.

ಹೌದು.. ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಕೇವಲ 29 ಎಸೆತಗಳಲ್ಲಿ 70 ರನ್ ಸಿಡಿಸಿದರು. ಅವರ ಈ ಅರ್ಧಶತಕದಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿ ಸೇರಿತ್ತು. ಇದಕ್ಕೂ ಮೊದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಕೇವಲ 34 ಎಸೆತಗಳಲ್ಲಿ 71ರನ್ ಸಿಡಿಸಿದ್ದರು. ಅವರ ಈ ಅಮೋಘ ಬ್ಯಾಟಿಂಗ್ ನಲ್ಲಿ ಐದು ಸಿಕ್ಸರ್ ಹಾಗೂ ಆರು ಬೌಂಡರಿ ಸೇರಿತ್ತು. 

ಕೊಹ್ಲಿ, ರೋಹಿತ್ ಶರ್ಮಾ ಆರ್ಭಟದ ಬ್ಯಾಟಿಂಗ್ ಮತ್ತು ಕೆಎಲ್ ರಾಹುಲ್ 91 ರನ್ ಗಳ ಪರಿಣಾಮ ಭಾರತ ತಂಡ ವಿಂಡೀಸ್ ವಿರುದ್ಧ ನಿಗದಿತ 20 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿ, ವಿಂಡೀಸ್ ಗೆ 241 ರನ್ ಗಳ ಗುರಿ ನೀಡಿತು. ಈ ಬೃಹತ್ ಗುರಿಯನ್ನು ಬೆನ್ನುಹತ್ತಿದ ವಿಂಡೀಸ್ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ 67 ರನ್ ಗಳ ಅಂತರದಲ್ಲಿ ಭಾರತಕ್ಕೆ ಶರಣಾಯಿತು. ಅಲ್ಲದೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. 

ಈ ಅದ್ಭುತ ಇನ್ನಿಂಗ್ಸ್ ಗಳ ಮೂಲಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಲಿ ಕ್ರಿಕೆಟ್ ವರ್ಷದಲ್ಲಿ ತಮ್ಮ ವೈಯುಕ್ತಿಕ ರನ್ ಗಳಿಕೆಯನ್ನು 2,633 ರನ್ ಗಳಿಗೆ ಏರಿಸಿಕೊಂಡಿದ್ದು, ಆ ಮೂಲಕ ಹಾಲಿ ವರ್ಷ ಟಿ20 ಮಾದರಿ ಕ್ರಿಕೆಟ್ ನಲ್ಲಿ ಗರಿಷ್ಛ ರನ್ ಪೇರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಿಗಳಾಗಿದ್ದಾರೆ. ಕೊಹ್ಲಿ 75 ಪಂದ್ಯಗಳಲ್ಲಿ (70 ಇನ್ನಿಂಗ್ಸ್) 52.66 ಸರಾಸರಿಯಲ್ಲಿ ಈ ಸಾಧನೆ ಗೈದಿದ್ದು ಅವರು ಈ ವರ್ಷ ಒಟ್ಟು 24 ಅರ್ಧಶತಕ ಗಳಿಸಿದ್ದಾರೆ. ಅಂತೆಯೇ ರೋಹಿತ್ ಶರ್ಮಾ 104 ಪಂದ್ಯಗಳಲ್ಲಿ (96 ಇನ್ನಿಂಗ್ಸ್) 32.10 ಸರಾಸರಿಯಲ್ಲಿ ಇಷ್ಟು ರನ್ ಪೇರಿಸಿದ್ದು, ಅವರು 19 ಅರ್ಧಶತಕ ಗಳಿಸಿದ್ದಾರೆ.

ಉಳಿದಂತೆ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಎರಡನೇ ಸ್ಥಾನದಲ್ಲಿದ್ದು, ಗಪ್ಟಿಲ್ ಈ ವರ್ಷ 2,436 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ಶೊಯೆಬ್ ಮಲ್ಲಿಕ್ ಇದ್ದು, ಅವರು 2,263 ರನ್ ಗಳಿಸಿದ್ದಾರೆ.

SCROLL FOR NEXT