ಕ್ರಿಕೆಟ್

3ನೇ ಟಿ20 ಪಂದ್ಯ: ಭಾರತದ ಗರಿಷ್ಠ ಸಾಧನೆ, ವಿಂಡೀಸ್ ನ ಕಳಪೆ ಸಾಧನೆ!

Srinivasamurthy VN

ಮುಂಬೈ: ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದ ಟೀಂ ಇಂಡಿಯಾ ದಾಖಲೆ ಬರೆದರೆ, ಸೋತು ಶರಣಾದ ವೆಸ್ಟ್ ಇಂಡೀಸ್ ತಂಡ ಯಾವುದೇ ತಂಡಕ್ಕೂ ಬೇಡವಾದ ಕಳಪೆ ದಾಖಲೆ ನಿರ್ಮಾಣ ಮಾಡಿದೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ 67 ರನ್ ಗಳ ಅಂತರದಲ್ಲಿ ಸೋತು 2-1 ಅಂತರದಲ್ಲಿ ಟಿ20 ಸರಣಿ ಸೋತ ವೆಸ್ಟ್ ಇಂಡೀಸ್ ತಂಡ ಕ್ರಿಕೆಟ್ ರಾಷ್ಟ್ರಗಳು ಬೇಡ ಎನ್ನುವ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ.

ಟಿ20 ಮಾದರಿಯಲ್ಲಿ ಗರಿಷ್ಟ ಸೋಲು ಕಂಡ ತಂಡಗಳ ಪಟ್ಟಿಯಲ್ಲಿ ಇದೀಗ ವೆಸ್ಟ್ ಇಂಡೀಸ್ ತಂಡ ಜಂಟಿ ಅಗ್ರ ಸ್ಥಾನಕ್ಕೇರಿದೆ. ನಿನ್ನೆಯ ಪಂದ್ಯವೂ ಸೇರಿದಂತೆ ಟಿ20ಯಲ್ಲಿ ವಿಂಡೀಸ್ ತಂಡ ಒಟ್ಟು 61 ಸೋಲುಗಳನ್ನು ಕಂಡಿದ್ದು, ಆ ಮೂಲಕ ಇಷ್ಟೇ ಪ್ರಮಾಣದ ಸೋಲು ಕಂಡಿರುವ ಶ್ರೀಲಂಕಾದೊಂದಿಗೆ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 60 ಪಂದ್ಯಗಳಲ್ಲಿ ಸೋಲು ಕಂಡಿರುವ ಬಾಂಗ್ಲಾದೇಶವಿದ್ದು, 56 ಪಂದ್ಯ ಸೋತಿರುವ ನ್ಯೂಜಿಲೆಂಡ್ ತಂಡ, 55 ಪಂದ್ಯಗಳಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಅಗ್ರ ಐದು ತಂಡಗಳ ಪಟ್ಟಿಯಲ್ಲಿವೆ.

ಭಾರತದ ಗರಿಷ್ಠ ಸಾಧನೆ
ಇನ್ನು ವಿಂಡೀಸ್ ವಿರುದ್ಧ 240 ರನ್ ಗಳ ಬೃಹತ್ ಗುರಿ ನೀಡಿದ ಭಾರತ ತಂಡ ಕೂಡ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಟಿ20 ಸರಣಿಯಲ್ಲಿ ತನ್ನ ನಾಲ್ಕನೇ ಗರಿಷ್ಠ ಮೊತ್ತವನ್ನು ಪೇರಿಸಿತು. ಪಟ್ಟಿಯಲ್ಲಿ 2017ರಲ್ಲಿ ಇಂದೋರ್ ನಲ್ಲಿ ಲಂಕಾ ವಿರುದ್ಧ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 260 ರನ್ ಪೇರಿಸಿತ್ತು. ಇದು ಟಿ20 ಪಂದ್ಯದಲ್ಲಿ ಭಾರತದ ಗರಿಷ್ಠ ರನ್ ಗಳಿಕೆಯಾಗಿದೆ. ಆ ಬಳಿಕ ಅಂದರೆ 2016ರಲ್ಲಿ ಲೌಡರ್ ಹಿಲ್ ನಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಗಳಿಸಿದ್ದ 4 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತ್ತು. ಇದು ಎರಡನೇ ಗರಿಷ್ಠ ರನ್ ಗಳಿಕೆಯಾಗಿತ್ತು. ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗಳಿಸಿದ 240 ರನ್ ಗಳು ಟೀಂ ಇಂಡಿಯಾದ ಮೂರನೇ ಗರಿಷ್ಛ ರನ್ ಗಳಿಕೆ ಸಾಧನೆಯಾಗಿದೆ.

SCROLL FOR NEXT