ಕ್ರಿಕೆಟ್

ರಾಷ್ಟ್ರೀಯ ಆಟಗಾರರನ್ನು ಎನ್‌ಸಿಎಗೆ ಮರಳಿ ತರಲು ಪ್ರಯತ್ನ: ಸೌರವ್ ಗಂಗೂಲಿ

Vishwanath S

ನವದೆಹಲಿ: ಬೆನ್ನು ಒತ್ತಡ ಮುರಿತ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್‌‌ಗೆ ನಿರಾಕರಿಸುತ್ತಿರುವುದರಿಂದ ಮತ್ತೊಮ್ಮೆ ಎನ್‌ಸಿಎ ಕಾರ್ಯವೈಖರಿಯ ಬಗ್ಗೆ ಅಪಸ್ವರ ಕೇಳಿಬಂದಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.

ಎನ್‌ಸಿಎಯಲ್ಲಿ ಬುಮ್ರಾ ಅವರ ಫಿಟ್ನೆಸ್ ಪರೀಕ್ಷೆ ಕೈಗೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಬಳಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಗಂಗೂಲಿ ಎನ್‌ಸಿಎಗೆ ತೆರಳಿ ಭಾರತ ತಂಡದ ಮಾಜಿ ಉಪ ನಾಯಕನ ಬಳಿ ದೀರ್ಘ ಸಮಾಲೋಚನೆ ಮಾಡಿದ್ದರು.

ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಎನ್‌ಸಿಎಯನ್ನು ಪಾರದರ್ಶಕಗೊಳಿಸಲಿದ್ದಾರೆ ಎಂಬ ನಂಬಿಕೆ. ಏಕೆಂದರೆ, ಅವರೊಬ್ಬ ಪ್ರಚಂಡ ಆಟಗಾರರಾಗಿದ್ದವರು. ಅವರು ಪಡೆದಿರುವ ಜವಾಬ್ದಾರಿಯಲ್ಲಿ ಪರಿಪೂರ್ಣತೆ ಹಾಗೂ ಬದ್ಧತೆ ತೋರಲಿದ್ದಾರೆ. ಸಂಘಟಿತವಾಗಿ ನಾವು ಅವರಿಗೆ ಎನ್‌ಸಿಎ ಮುಖ್ಯಸ್ಥ ಸ್ಥಾನ ನೀಡಿದ್ದೇವೆ. ಅವರ ಅವಧಿಯನ್ನೂ ಮುಂದೆ ವಿಸ್ತರಿಸಲಿದ್ದೇವೆ. ಇದೀಗ ಉದ್ಬವವಾಗಿರುವ ಎಲ್ಲ ಸಮಸ್ಯೆೆಗಳ ಸಂಪೂರ್ಣ ಮಾಹಿತಿಯನ್ನು ಒಂದು ವಾರದಲ್ಲಿ ಪಡೆಯಲಿದ್ದೇವೆ ಎಂದು ದಾದಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬ ಅಂತಾರಾಷ್ಟ್ರೀಯ ಆಟಗಾರನಿಗೂ ಎನ್‌ಸಿಎ ಆರಂಭ ಹಾಗೂ ಅಂತಿಮವಾಗಿದೆ.  ನಾನು ಬಿಸಿಸಿಐ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಕೆಲವು ವಾರಗಳಷ್ಟೆ ಕಳೆದಿವೆ. ಹಲವು ಬಾರಿ ದ್ರಾವಿಡ್ ಅವರನ್ನು ಭೇಟಿಯಾಗಿದ್ದೇನೆ. ಅವರ ಬಳಿ ಈ ಬಗ್ಗೆ ಮಾತನಾಡಿ ಅಲ್ಲಿನ ಸಮಸ್ಯೆ ಅರಿತುಕೊಳ್ಳಲಿದ್ದೇನೆ ಎಂದರು.

ಜಸ್ಪ್ರಿತ್ ಬುಮ್ರಾ ಜತೆಗೆ ಇತ್ತೀಚೆಗೆ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಕೂಡ ಎನ್‌ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಅಲ್ಲದೇ, ಕಳೆದ ವಾರ ಗಾಯಕ್ಕೆ ತುತ್ತಾಗಿ ಸ್ವಿಂಗ್  ಮಾಸ್ಟರ್ ಭುವನೇಶ್ವರ್ ಕುಮಾರ್ ಅವರ ಗಾಯದ ಸ್ವರೂಪ ಪತ್ತೆ ಹಚ್ಚುವಲ್ಲಿ ಎನ್‌ಸಿಎ ವೈದ್ಯರು ವಿಫಲರಾಗಿದ್ದರು.

SCROLL FOR NEXT