ಕ್ರಿಕೆಟ್

ಕಟಕ್​ನಲ್ಲಿ ಕ್ಲೈಮ್ಯಾಕ್ಸ್: ಸರಣಿ ಗೆಲುವಿನೊಂದಿಗೆ ವರ್ಷಕ್ಕೆ ವಿದಾಯ ಹೇಳಲು ಇಂಡೋ-ವಿಂಡೀಸ್ ಕಾತರ!

Srinivasamurthy VN

ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಅಂತಿಮ ಮತ್ತು ನಿರ್ಣಾಯಕ ಹಂತ ತಲುಪಿದ್ದು, ಇಂದು ಕಟಕ್ ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಸಿರೀಸ್ ಡಿಸೈಡರ್ ಆಗಿದೆ.

ಈಗಾಗಲೇ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದು, ಇಂದು ನಡೆಯುವ ಅಂತಿಮ ಪಂದ್ಯದಲ್ಲಿ ಗೆಲ್ಲುವ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ. ವಿರಾಟ್ ಕೊಹ್ಲಿ ಬಳಗಕ್ಕೆ ಇದು 2019ರ ಕೊನೇ ಪಂದ್ಯವಾಗಿದ್ದು, ಗೆಲುವಿನೊಂದಿಗೆ ವರ್ಷವನ್ನು ಹರ್ಷದಿಂದ ಮುಗಿಸುವ ಇರಾದೆಯಲ್ಲಿದೆ.

ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರಿಗೆ ಆಘಾತ ನೀಡಿ ಬೀಗಿದ್ದ ವಿಂಡೀಸ್ ತಂಡ, ವಿಶಾಖಪಟ್ಟಣದಲ್ಲಿ ಭಾರತದ ಬ್ಯಾಟಿಂಗ್ ಅಬ್ಬರದೆದುರು ಮಂಕಾಗಿತ್ತು. ಇದೀಗ ಅಂತಿಮ ಪಂದ್ಯದಲ್ಲಿ ಮತ್ತೆ ಭಾರತಕ್ಕೆ ಆಘಾತ ನೀಡುವ ಮೂಲಕ ಸಂಭ್ರಮದಿಂದ ತವರಿಗೆ ಮರಳುವ ಗುರಿ ಹೊಂದಿದೆ.  ಇದೇ ಕಾರಣಕ್ಕೆ ಇಂದಿನ ಕಟಕ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಇನ್ನು ಭಾರತ ತಂಡದ ವಿಚಾರಕ್ಕೆ ಬರುವುದಾದರೆ ಬ್ಯಾಟಿಂಗ್-ಬೌಲಿಂಗ್ ವಿಭಾಗ ಕಳೆದ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದರೂ, ಫೀಲ್ಡಿಂಗ್ ವಿಭಾಗ ಇನ್ನಷ್ಟು ಸುಧಾರಣೆ ಕಾಣಬೇಕಾಗಿದೆ. ಕಳೆದ ಪಂದ್ಯದಲ್ಲೂ ಸಾಕಷ್ಟು ಕ್ಯಾಚ್ ಗಳು ಮಿಸ್ ಆಗಿದ್ದವು. ಈ ಪಂದ್ಯದಲ್ಲಿ ಈ ತಪ್ಪು ಮರುಕಳಿಸಬಾರದು. 

ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ಕೆ
ಕಟಕ್​ನಲ್ಲಿ ಸರಿ ಸುಮಾರು 3 ವರ್ಷಗಳ ಹಿಂದೆ ಕೊನೇ ಏಕದಿನ ಪಂದ್ಯ ಆಡಿದ್ದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ 381 ರನ್​ಗಳ ಬೃಹತ್ ಪೇರಿಸಿ ಅಂತಿಮವಾಗಿ ಕೇವಲ 15 ರನ್​ಗಳಿಂದ ಜಯಿಸಿತ್ತು. 2017ರ ಮಾರ್ಚ್ ಬಳಿಕ ಇಲ್ಲಿ ಹೆಚ್ಚಿನ ಲಿಸ್ಟ್ ಎ ಪಂದ್ಯಗಳೂ ನಡೆದಿಲ್ಲ. ಆದರೂ, ಬಾರಾಬತಿ ಕ್ರೀಡಾಂಗಣದ ಪಿಚ್ ​ನಲ್ಲಿ ವಿಶಾಖಪಟ್ಟಣದಂತೆ ರನ್​ ಪ್ರವಾಹ ಹರಿಯುವ ನಿರೀಕ್ಷೆ ಹೆಚ್ಚಿದೆ. ಇಲ್ಲೂ ಇಬ್ಬನಿ ಸಮಸ್ಯೆ ಇದ್ದು, ಟಾಸ್ ಗೆದ್ದ ತಂಡದ ನಾಯಕ ಕಣ್ಣುಮುಚ್ಚಿ ಫೀಲ್ಡಿಂಗ್ ಆಯ್ದುಕೊಳ್ಳಲಿದ್ದಾರೆ.

ಪಂದ್ಯ ಇಂದು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.

SCROLL FOR NEXT