ಕ್ರಿಕೆಟ್

ಬಿಸಿಸಿಐ ಒತ್ತಡಕ್ಕೆ ಮಣಿದ ಬಿಸಿಬಿ: ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಆಟಗಾರರಿಗೆ ನೋ ಎಂಟ್ರಿ!

Vishwanath S

ನವದೆಹಲಿ: ಬಾಂಗ್ಲಾದೇಶ ಆಯೋಜಿಸಲಿರುವ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ತಂಡಗಳ ನಡುವಿನ ಎರಡು ಟಿ20 ಪಂದ್ಯಗಳಿಗೆ ಪಾಕಿಸ್ತಾನ ಆಟಗಾರರು ಬೇಡ ಎಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಒತ್ತಡಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಣಿದಿದೆ.

ಈ ಟೂರ್ನಿಯಲ್ಲಿ ಏಷ್ಯಾ ಇಲೆವೆನ್ ತಂಡದಲ್ಲಿ ಟೀಂ ಇಂಡಿಯಾ ಆಟಗಾರರು ಆಡಬೇಕು ಎಂದರೆ ಪಾಕ್ ಆಟಗಾರರಿಗೆ ಅವಕಾಶ ನೀಡಬಾರದು ಎಂದು ಹೇಳಿತ್ತು. ಒಂದು ವೇಳೆ ಪಾಕ್ ಆಟಗಾರರಿಗೆ ಅವಕಾಶ ಕೊಟ್ಟರೆ ಭಾರತದ ಯಾವುದೇ ಆಟಗಾರರು ಟೂರ್ನಿಯಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. 

ಬಿಸಿಸಿಐ ಪ್ರಸ್ತಾಪಕ್ಕೆ ಬಿಸಿಬಿ ಸಹ ಸಮ್ಮತಿ ವ್ಯಕ್ತಪಡಿಸಿದ್ದು ಏಷ್ಯಾ ಇಲೆವೆನ್ ತಂಡದಲ್ಲಿ ಆಡಲು ಪಾಕ್ ಆಟಗಾರರಿಗೆ ಆಹ್ವಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಈ ಸಂಬಂಧ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಮಾತನಾಡಿದ್ದು ಭಾರತ ಮತ್ತು ಪಾಕ್ ಆಟಗಾರರು ಒಂದೇ ತಂಡದಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ತಂಡದಲ್ಲಿ ಐವರು ಟೀಂ ಇಂಡಿಯಾ ಆಟಗಾರರು ಆಡಲಿದ್ದಾರೆ. ಈ ಆಟಗಾರರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಮಾಡಲಿದ್ದಾರೆ ಎಂದರು. 

ಬಾಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಟಿ20 ಟೂರ್ನಿ ಆಯೋಜನೆಗೆ ಮುಂದಾಗಿದ್ದು ಇದಕ್ಕೆ ಐಸಿಸಿ ಸಹ ಒಪ್ಪಿಗೆ ನೀಡಿತ್ತು. ಅಲ್ಲದೆ ಪಂದ್ಯಗಳ ವೇಳಾಪಟ್ಟಿ ಮತ್ತು ಆಟಗಾರರ ಪಟ್ಟಿಯನ್ನು ನೀಡುವಂತೆ ಸೂಚಿಸಿತ್ತು. 

SCROLL FOR NEXT