ಕ್ರಿಕೆಟ್

ಸಿಡ್ನಿ ಟೆಸ್ಟ್ ನಲ್ಲಿ ಭಾರತಕ್ಕೆ ಸೋಲೇ ಇಲ್ಲ, ಅಂಕಿ ಅಂಶಗಳು ಏನು ಹೇಳುತ್ತವೆ?

Srinivasamurthy VN
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಪಂದ್ಯ ಡ್ರಾ ಅಥವಾ ಆಸ್ಟ್ರೇಲಿಯಾ ತಂಡ ಸೋಲುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.
ಹೌದು.. ಪ್ರಸ್ತುತ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಸೋಲುವ ಪ್ರಶ್ನೆಯೇ ಇಲ್ಲ. ಹೀಗೆ ಹೇಳುತ್ತಿರುವುದು ನಾವಲ್ಲ.. ಬದಲಿಗೆ ಅಂಕಿಗಳು.. ಸಿಡ್ನಿ ಕ್ರಿಡಾಂಗಣದಲ್ಲಿ ಮಾತ್ರವಲ್ಲದೇ ವಿಶ್ವದ ಯಾವುದೇ ಕ್ರೀಡಾಂಗಣದಲ್ಲೂ ಮೊದಲ ಇನ್ನಿಂಗ್ಸ್ ನಲ್ಲಿ 596 ರನ್ ಗಳಿಗೂ ಅಧಿಕ ರನ್ ಪೇರಿಸಿದ ತಂಡ ಪಂದ್ಯ ಸೋತ ಇತಿಹಾಸವೇ ಇಲ್ಲ. ಹೀಗಾಗಿ ಆಸಿಸ್ ವಿರುದ್ಧದ ಹಾಲಿ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲುವ ಸಾಧ್ಯತೆ ತೀರಾ ಕಡಿಮೆ ಮತ್ತು ಸರಣಿ ಕೊಹ್ಲಿ ಪಡೆ ವಶವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಈ ಹಿಂದೆ ಇದೇ ಎಸ್ ಸಿಜಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಸಾಕಷ್ಟು ಬಾರಿ 596 ರನ್ ಗಳಿಗೂ ಅಧಿಕ ರನ್ ಪೇರಿಸಿತ್ತು. ಆ ಪಂದ್ಯಗಳಲ್ಲೂ ಟೀಂ ಇಂಡಿಯಾ ಸೋತಿರಲಿಲ್ಲ. 1986ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತ ತಂಡ 600 ರನ್ ಕಲೆಹಾಕಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 600 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಆಸಿಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 396 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಕಾಂಗರೂಗಳು ನಿಧಾನಗತಿಯ ಬ್ಯಾಟಿಂಗ್ ಮಾಡಿ 2ನೇ ಇನ್ನಿಂಗ್ಸ್ ನಲ್ಲಿ 119 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದರು. ಈ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿತ್ತು.
ಇದಾದ ಬಳಿಕ 2004ರಲ್ಲಿ ಭಾರತ ತಂಡ ಮತ್ತೆ 600ಕ್ಕೂ ಹೆಚ್ಚು ರನ್ ಗಳಿಸಿತ್ತು. 2004ರಜನವರಿ 2ರಂದು ಆರಂಭವಾಗಿದ್ದ ಈ ಪಂದ್ಯದಲ್ಲೂ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 705 ರನ್ ಕಲೆಹಾಕಿತ್ತು. ಇದು ಎಸ್ ಸಿಜಿ ಅಂಗಳದಲ್ಲಿ ತಂಡವೊಂದು ಗಳಿಸಿದ ಗರಿಷ್ಟ ಮೊದಲ ಇನ್ನಿಂಗ್ಸ್ ರನ್ ಗಳಿಕೆಯಾಗಿ ಉಳಿದಿದೆ. ಈ ಪಂದ್ಯ ಕೂಡ ನೀರಸ ಡ್ರಾದಲ್ಲಿ ಅಂತ್ಯವಾಗಿತ್ತು. ಇದಾದ ಬಳಿಕ 2008ರಲ್ಲಿ ಮತ್ತೆ ಮತ್ತೆ ಭಾರತ ತಂಡ 532ರನ್ ಗಳಿಸಿತ್ತಾದರೂ, 2ನೇ ಇನ್ನಿಂಗ್ಸ್ ನಲ್ಲಿ ಕಳಪೆ ಆಟ ತಂಡ ಈ ಪಂದ್ಯವನ್ನು ಸೋಲುವಂತೆ ಮಾಡಿತ್ತು.
ಇದೀಗ ಮತ್ತೆ ಭಾರತ ತಂಡ 600ಕ್ಕೂ ಅಧಿಕ ರನ್ ಪೇರಿಸಿದ್ದು ಈ ಪಂದ್ಯದ ಫಲಿತಾಂಶ ಕೂಡ ಭಾರತದ ಪರ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
SCROLL FOR NEXT