ಕ್ರಿಕೆಟ್

ಆಸಿಸ್ ಪ್ರವಾಸದಲ್ಲಿ ಪಂತ್ ಗೆ ಖುಲಾಯಿಸಿದ ಅದೃಷ್ಟ; ವಿಶ್ವಕಪ್ ಟೂರ್ನಿಗೆ ಖಚಿತ ಆಯ್ಕೆ

Srinivasamurthy VN
ಮುಂಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಹೀರೋ ಆಗಿದ್ದ 'ಬೇಬಿ ಸಿಟ್ಟರ್' ಖ್ಯಾತಿಯ ರಿಷಬ್ ಪಂತ್ ಗೆ ಅದೃಷ್ಟ ಖುಲಾಯಿಸಿದ್ದು, ಮುಂಬರುವ 2019ರ ವಿಶ್ವಕಪ್ ಟೂರ್ನಿಗೆ ಅವರ ಆಯ್ಕೆ ಖಚಿತವಾಗಿದೆ.
ಟೀಂ ಇಂಡಿಯಾದ ಉದಯೋನ್ಮುಖ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಸದ್ಯ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​​ ಸರಣಿಯಲ್ಲಿ ವಿಕೆಟ್​ ಕೀಪರ್​​ ಹಾಗೂ ಓರ್ವ ಬ್ಯಾಟ್ಸ್​ಮನ್​ ಆಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇದರ ಮಧ್ಯೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​​ ವಿರುದ್ಧದ ಏಕದಿನ ಸರಣಿಗಳಿಗೆ ಆಯ್ಕೆಯಾಗದ ಕಾರಣ 2019ರ ಏಕದಿನ ವಿಶ್ವಕಪ್​​ನಿಂದ ಹೊರಬೀಳಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಮಾತುಗಳನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಸುಳ್ಳು ಮಾಡಿದೆ.
ಈ  ಬಗ್ಗೆ ಸ್ವತಃ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ವಿಶ್ವಕಪ್ ಟೂರ್ನಿಗೆ ಮೂವರು ವಿಕೆಟ್ ಕೀಪರ್ ಬ್ಯಾಟ್ಸಮನ್ ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 'ರಿಷಬ್​ ಪಂತ್​ ಖಂಡಿತವಾಗಿ 2019ರ ವಿಶ್ವಕಪ್ ನಲ್ಲಿ ನಮ್ಮ ಯೋಜನೆಯ ತಂಡದ ಭಾಗವಾಗಲಿದ್ದು, ಮುಂಬರುವ ಸರಣಿಗಳಲ್ಲಿ ಅವರ ಆಯ್ಕೆ ಮಾಡಿಲ್ಲ ಎಂಬ ಕಾರಣದಿಂದ ಈ ರೀತಿ ವಿಚಾರ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ.  ಅಂತೆಯೇ ಈಗಾಗಲೆ ವಿಶ್ವಕಪ್ ಗಾಗಿ ಮೂವರು ವಿಕೆಟ್​ ಕೀಪರ್ ಗಳನ್ನು ಅಯ್ಕೆ ಮಾಡುವ ಯೋಚನೆಯಲ್ಲಿದ್ದು, ಈ ಪೈಕಿ ಎಂಎಸ್ ಧೋನಿ ನಮ್ಮ ಮೊದಲ ಆಯ್ಕೆಯಾಗಿರುತ್ತದೆ. ಬಳಿತ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಇರಲಿದ್ದಾರೆ ಎಂದು ಹೇಳಿದ್ದಾರೆ.
ಪಂತ್ ಆಯ್ಕೆಯಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ನಾವು ಆಯ್ಕೆ ಮಾಡಬೇಕೆಂದಿರುವ  ಮೂರು ವಿಕೆಟ್​ ಕೀಪರ್ ಗಳು ಪ್ರಸ್ತುತ ಕ್ರಿಕೆಟ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಮುಂದಿನ ಏಕದಿನ ಸರಣಿಗಾಗಿ ಧೋನಿ ಮೇಲೆ ನಾವು ವಿಶ್ವಾಸವನ್ನಿಟ್ಟುಕೊಂಡು ಅವಕಾಶ ನೀಡಲಾಗಿದ್ದು, ಅವರಿಗೆ ದಿನೇಶ್​ ಕಾರ್ತಿಕ್​ ಸಾಥ್​ ನೀಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ರಿಷಬ್ ಪಂತ್​ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವಿಕೆಟ್​ ಕೀಪರ್​​ ಆಗಿ ನಿರ್ವಹಿಸಿದ್ದು, ಅದಕ್ಕೂ ಮುನ್ನ ಟಿ20 ಆಸೀಸ್​ ಸರಣಿಯಲ್ಲೂ ಆಡಿರುವ ಕಾರಣ, ವಿಶ್ರಾಂತಿ ಅಗತ್ಯವಿದ್ದು, ಅದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಡ್ನಿ ಟೆಸ್ಟ್​ ಪಂದ್ಯ ಪಂತ್​ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಹೊಸ ತಿರುವು ನೀಡಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು.
ಈಗಾಗಲೇ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಕೂಡ ರಿಷಭ್​ ಪಂತ್​ ಗುಣಗಾಣ ಮಾಡಿದ್ದು, 2019ರ ವಿಶ್ವಕಪ್​​ನಲ್ಲಿ ಪಂತ್ ಟೀಂ ಇಂಡಿಯಾ ಪರ ಪಂದ್ಯವನ್ನು ಗೆಲ್ಲಿಸಿ ಕೊಡುವ ಆಟಗಾರನಾಗಿದ್ದು, ಆತನಿಗೆ ಹೆಚ್ಚು ಹೆಚ್ಚು ಅವಕಾಶ ನೀಡುವಂತೆ ಆಯ್ಕೆ ಸಮಿತಿ ಬಳಿ ತಿಳಿಸುವೆ ಎಂದು ಈ ಹಿಂದೆ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಜನವರಿ 12ರಿಂದ ಆರಂಭಗೊಳ್ಳಲಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ
ವಿರಾಟ್​ ಕೊಹ್ಲಿ(ನಾಯಕ​), ರೋಹಿತ್​ ಶರ್ಮಾ, ಕೆಎಲ್​ ರಾಹುಲ್​, ಶಿಖರ್​ ಧವನ್​, ಅಂಬಾಟಿ ರಾಯುಡು, ದಿನೇಶ್​ ಕಾರ್ತಿಕ್​, ಕೇದಾರ್​ ಜಾಧವ್​, ಎಂಎಸ್​ ಧೋನಿ(ವಿಕೆಟ್ ಕೀಪರ್), ಹಾರ್ದಿಕ್​ ಪಾಂಡ್ಯ, ಕುಲ್ ದೀಪ್​ ಯಾದವ್​, ಯಜುವೇಂದ್ರ ಚಹಾಲ್​, ರವೀಂದ್ರ ಜಡೇಜಾ, ಭುವನೇಶ್ವರ್​ ಕುಮಾರ್​, ಜಸ್ ಪ್ರೀತ್​ ಬುಮ್ರಾ, ಖಲೀಲ್​ ಅಹ್ಮದ್, ಮೊಹಮ್ಮದ್​ ಶಮಿ
SCROLL FOR NEXT