ಕ್ರಿಕೆಟ್

ಸಚಿನ್ ಕೋಪಗೊಂಡಿರುವುದನ್ನು ನೋಡಿದ್ದೇನೆ, ಆದರೆ ಧೋನಿ ಕೋಪ ನೋಡಿಲ್ಲ: ಕೋಚ್ ರವಿಶಾಸ್ತ್ರಿ

Srinivasamurthy VN
ಮೆಲ್ಬೋರ್ನ್: ಶಾಂತ ಸ್ವಭಾವದ ಸಚಿನ್ ತೆಂಡೂಲ್ಕರ್ ಕೂಡ ಕೋಪ ಗೊಂಡಿರುವುದನ್ನು ನೋಡಿದ್ದೇನೆ. ಆದರೆ ಧೋನಿ ಕೋಪಗೊಂಡಿದ್ದನ್ನು ನಾನು ನೋಡಿಲ್ಲ ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಎಂಸಿಜಿ ಕ್ರೀಡಾಂಗಣದಲ್ಲಿ ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಾಸ್ತ್ರಿ, ಧೋನಿ ಕ್ರಿಕೆಟ್ ಜಗತ್ತಿನ ಅಪರೂಪದ ಆಟಗಾರ. ದಶಕಗಳಲ್ಲಿ ಒಬ್ಬರು. ನನ್ನ ಪ್ರಕಾರ ಮಹೇಂದ್ರ ಸಿಂಗ್ ಧೋನಿಗೆ ರಿಪ್ಲೇಸ್ ಆಟಗಾರರೇ ಇಲ್ಲ ಎಂದು ಹೇಳಿದ್ದಾರೆ. 
ಧೋನಿ, ಆಧುನಿಕ ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಟಗಾರ. ಜಗತ್ತಿನ ಅತ್ಯುತ್ತಮ ಕ್ರಿಕೆಟಿಗರಲ್ಲಿ ಧೋನಿ ಅಗ್ರಗಣ್ಯರು. ಶಾಂತ ಸ್ವಭಾದ ಸಚಿನ್ ತೆಂಡೂಲ್ಕರ್ ಕೋಪಗೊಂಡಿರುವುದನ್ನು ನಾನು ನೋಡಿದ್ದೇನೆ, ಆದರೆ ಧೋನಿ ಕೋಪಗೊಂಡಿದ್ದನ್ನು ನಾನು ನೋಡಿಲ್ಲ. ಧೋನಿಯ ಸಾಮರ್ಥ್ಯ, ಅವರ ಕ್ಯಾಲಿಬರ್ ತಕ್ಕಂತೆ ಆಡುವ ಆಟಗಾರ ಮತ್ತೊಬ್ಬನಿಲ್ಲ. ಇಂತಹ ಆಟಗಾರರಿಗೆ ಪರ್ಯಾಯವೇ ಇಲ್ಲ. 30 - 40 ವರ್ಷಗಳಿಗೊಮ್ಮೆ ಇಂತಹ ಆಟಗಾರರು ಉದಯಿಸುತ್ತಾರೆ. ರಿಷಬ್ ಪಂತ್ ಧೋನಿಗೆ ಪರ್ಯಾಯ ಎಂದು ಹೇಳಲಾಗುತ್ತಿದೆಯಾದರೂ, ಧೋನಿಗೆ ಧೋನಿಯೇ ಸಾಟಿ ಎಂದು ಶಾಸ್ತ್ರಿ ಹೇಳಿದ್ದಾರೆ.
ಇದೇ ವೇಳೆ ರಿಷಬ್ ಪಂತ್ ಧೋನಿಗೆ ಪರ್ಯಾಯವಾಗುತ್ತಾರೆ ಎಂಬ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರ ಹೇಳಿಕೆಗೆ ಉತ್ತರಿಸಿದ ಶಾಸ್ತ್ರಿ, ಹಾಗಾದರೆ ನನಗೂ ಸಂತೋಷವೇ. ಪಂತ್ ಗೆ ಆ ಸಾಮರ್ಥ್ಯವಿದೆ. ಆದರೆ ಪಂತ್ ರ ಹೀರೋ ಕೂಡ ಎಂಎಸ್ ಧೋನಿಯೇ.. ಪ್ರತೀ ನಿತ್ಯ ಧೋನಿಗೆ ಕರೆ ಮಾಡಿ ಮಾತನಾಡುತ್ತಿರುತ್ತಾನೆ. ಟೆಸ್ಟ್ ಸರಣಿ ವೇಳೆ ಸಾಕ್ಷಿ ಮಾಡಿದ ಕರೆಗಳಿಗಿಂತ ಪಂತ್ ಧೋನಿಗೆ ಮಾಡಿದ ಕರೆಗಳ ಸಂಖ್ಯೆಯೇ ಅಧಿಕವಾಗಿರಬಹುದು ಎಂದು ಶಾಸ್ತ್ರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಧೋನಿ ಓರ್ವ ಬ್ಯಾಟ್ಸಮನ್ ಆಗಿ ಮಾತ್ರವಲ್ಲ.. ಓರ್ವ ಹಿರಿಯ ಆಟಗಾರನಾಗಿ, ಮಾರ್ಗದರ್ಶಕನಾಗಿ ತಂಡಕ್ಕೆ ಅನಿವಾರ್ಯವಾಗಿದ್ದಾರೆ. ತಂಡದಲ್ಲಿ ಧೋನಿ ಇದ್ದಕೆ ಕ್ಯಾಪ್ಟನ್ ಕೊಹ್ಲಿಯ ಅರ್ಧ ಜವಾಬ್ದಾರಿ ಕಡಿಮೆ ಇರುತ್ತದೆ. ತಂಡ ಬೇಕು  ಬೇಡಗಳನ್ನು ಧೋನಿ ಸಂದರ್ಭಕ್ಕೆ ತಕ್ಕಂತೆ ಅರ್ಥೈಸುತ್ತಾರೆ. ಇದೇ ಕಾರಣಕ್ಕೆ ತಂಡದ ಪ್ರತೀಯೊಬ್ಬರೂ ಧೋನಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಧೋನಿ ತಂಡಕ್ಕೆ 10 ವರ್ಷಕ್ಕೂ ಅಧಿಕ ಸಮಯ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅನುಭವ ಇಂದು ತಂಡಕ್ಕೆ ಅನುಕೂಲವಾಗುತ್ತಿದೆ ಎಂದು ಶಾಸ್ತ್ರಿ ಹೇಳಿದರು.
SCROLL FOR NEXT