ಮೆಲ್ಬೋರ್ನ್: ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ಆಸಿಸ್ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ಗೆ ಕಾರಣರಾಗಿದ್ದ ಭಾರತೀಯ ಸ್ಪಿನ್ನರ್ ಯಜುವೇಂದ್ರ ಚಹಲ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಚಹಲ್, 10 ಓವರ್ ಗಳನ್ನು ಎಸೆದು ಒಟ್ಟು 46 ರನ್ ನೀಡಿ ಬರೊಬ್ಬರಿ 6 ವಿಕೆಟ್ ಪಡೆದರು. ತಮ್ಮ ಈ ಅಮೋಘ ಪ್ರದರ್ಶನದಿಂದಲೇ ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ಇದೀಗ ತಮ್ಮ ಇದೇ ಪ್ರದರ್ಶನದ ಮೂಲಕ ಚಹಲ್ ಅಪರೂಪದ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಆಸಿಸ್ ನೆಲದಲ್ಲಿ ಏಕದಿನ ಪಂದ್ಯವೊಂದರಲ್ಲಿ ಗರಿಷ್ಠ ಅಂದರೆ 6 ವಿಕೆಟ್ ಪಡೆದ ಭಾರತದ ಮತ್ತು ವಿಶ್ವದ ಮೊದಲ ಸ್ಪಿನ್ನರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಹಿಂದೆ 1984 ರಲ್ಲಿ ಇದೇ ಎಂಸಿಜಿ ಕ್ರೀಡಾಂಗಣದಲ್ಲಿ ಅಬ್ದುಲ್ ಖಾದಿರ್ ಅವರು 53 ರನ್ ಗೆ 5 ವಿಕೆಟ್ ಪಡೆದಿದ್ದರು. ಇದು ಸ್ಪಿನ್ನರ್ ಓರ್ವನ ಗರಿಷ್ಠ ಸಾಧನೆಯಾಗಿತ್ತು. ಆದರೆ ಈ ಸಾಧನೆಯನ್ನು ಚಹಲ್ ಮೀರಿ ನಿಂತಿದ್ದಾರೆ.
ಇನ್ನು ಸ್ಪಿನ್ನರ್ ಗಳ ಹೊರತಾಗಿ ಆಸಿಸ್ ನೆಲದಲ್ಲಿ ಸಾಕಷ್ಟು ಬೌಲರ್ ಗಳು ಏಕದಿನ ಪಂದ್ಯದಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಪೈಕಿ ರವಿಶಾಸ್ತ್ರಿ5/15 (ಪರ್ತ್ 1991), ಶೇನ್ ವಾರ್ನ್ 5/33 (1996ರಲ್ಲಿ ಎಸ್ ಸಿಜಿ, ವಿಂಡೀಸ್ ವಿರುದ್ಧ), ಸಕ್ಲೈನ್ ಮುಷ್ತಾಕ್ 5/29(ಅಡಿಲೇಡ್, 1996), ಜಿಮ್ಮಿ ಆ್ಯಡಮ್ಸ್ 5/37 (ಅಡಿಲೇಡ್, 1996), ಬ್ರಾಡ್ ಹಾಗ್ 5/32, (2005, ಎಂಸಿಜಿಯಲ್ಲಿ) ಇಮ್ರಾನ್ ತಾಹಿರ್ 5/45 ಎಸ್ ಸಿಜಿಯಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದರು.