ಕ್ರಿಕೆಟ್

ಮತ್ತೆ ದಾಖಲೆ ಬರೆದ ವಿರಾಟ್ ಕೊಹ್ಲಿ, ಈ ಬಾರಿ ಬ್ಯಾಟ್ ನಿಂದಲ್ಲ!

Srinivasamurthy VN
ಬೇ ಓವಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವಾಡುವ ಪ್ರತೀ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆ ನಿರ್ಮಾಣ ಮಾಡುತ್ತಿದ್ದು, ಇದೀಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.
ಹೌದು.. ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲೂ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ 2 ರ ಪಂದ್ಯ ಬಾಕಿ ಇರುವಂತೆಯೇ 3-0 ಅಂತರದಲ್ಲಿ ಜಯಸಿದೆ. ಆ ಮೂಲಕ ಆಸ್ಚ್ರೇಲಿಯಾ ಪ್ರವಾಸದ ಬಳಿಕ ನ್ಯೂಜಿಲೆಂಡ್ ನಲ್ಲೂ ತನ್ನ ಜೈತ್ರ ಯಾತ್ರೆ ಮುಂದುವರೆಸಿದೆ.
ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಗೆಲುವಿನ ಮೂಲಕ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣ ಮಾಡಿದ್ದು, ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಈ ವರೆಗೂ 63 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಸಾರಥ್ಯ ವಹಿಸಿದ್ದು, ಈ ಪೈಕಿ ಬರೊಬ್ಬರಿ 47 ಪಂದ್ಯಗಳಲ್ಲಿ ತಂಡ ಜಯ ಗಳಿಸಿದೆ. ಆ ಮೂಲಕ ಕೊಹ್ಲಿ ಜಿಂಬಾಂಬ್ವೆ ಹಿರಿಯ ಆಟಗಾರ ಚಿಗಂಬುರಾ (62 ಪಂದ್ಯ, 18 ಗೆಲುವು) ಪಾಕಿಸ್ತಾನದ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ (62 ಪಂದ್ಯ, 26 ಗೆಲುವು) ಮತ್ತು ನ್ಯೂಜಿಲೆಂಡ್ ನ ಮೆಕ್ಕಲಮ್ (62 ಪಂದ್ಯ, 36 ಗೆಲುವು) ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದು, ಪಾಟಿಂಗ್ ಒಟ್ಟು 230 ಪಂದ್ಯಗಳಿಗೆ ತಂಡದ ನಾಯಕತ್ವ ವಹಿಸಿದ್ದು, ಈ ಪೈಕಿ 165 ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಿದೆ. ಇನ್ನು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ನೇತೃತ್ವದಲ್ಲಿ ತಂಡ 218 ಪಂದ್ಯಗಳನ್ನಾಡಿದ್ದು, ಈ ಪೈಕಿ 98 ಪಂದ್ಯಗಳಲ್ಲಿ ಜಯಗಳಿಸಿದೆ.
SCROLL FOR NEXT