ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ರಬಾಡಾ ದಾಳಿಗೆ ತಲೆಬಾಗಿದ ಪ್ರಬಲ ಆಸಿಸ್, ದ.ಆಫ್ರಿಕಾ ವಿರುದ್ಧ 10 ರನ್ ಗಳ ಸೋಲು

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 10 ರನ್ ಗಳಿಂದ ಮಣಿಸಿ, ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳಿದೆ.
ದಕ್ಷಿಣ ಆಫ್ರಿಕಾ ನೀಡಿದ 326 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ (122 ರನ್)ಶತಕ ಮತ್ತು ಅಲೆಕ್ಸ್ ಕರ್ರೆ 85 ರನ್ ಗಳ ನೆರವಿನಿಂದ ಗೆಲುವಿನ ಹೊಸ್ತಿಲಿಗೆ ಬಂದಿತ್ತಾದರೂ, ಆಫ್ರಿಕಾದ ಕಾಗಿಸೋ ರಬಾಡ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 315 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಆಫ್ರಿಕಾ ಎದುರು 10 ರನ್ ಗಳ ಅಂತರದಲ್ಲಿ ಮುಗ್ಗರಿಸಿತು. 
ಆಸಿಸ್ ಪರ ವಾರ್ನರ್, ಕರ್ರೆ ಅವರನ್ನು ಹೊರತು ಪಡಿಸಿದರೆ, ಉಳಿದ ಯಾವ ಪ್ರಮುಖ ಬ್ಯಾಟ್ಸ್ ಮನ್ ಕೂಡ ದೊಡ್ಡ ಮೊತ್ತ ಕಲೆ ಹಾಕಲಿಲ್ಲ. ಸ್ಟೀವ್ ಸ್ಮಿತ್ ಕೇವಲ 7ರನ್ ಗಳಿಗೆ ಔಟ್ ಆದರೆ, ಖವಾಜ 18 ರನ್ ಗಳಿಗೆ ಔಟ್ ಆಗಿದ್ದು, ಆಸಿಸ್ ಗೆ ಭಾರಿ ಹಿನ್ನಡೆಯಾಗಿತ್ತು. 49ನೇ ಓವರ್ ನಲ್ಲಿ ಖವಾಜ ಮತ್ತು ಮಿಚೆಲ್ ಸ್ಟಾರ್ಕ್ ಔಟ್ ಆಗುವುದರೊಂದಿಗೆ ಆಸಿಸ್ ಸೋಲು ಖಚಿತವಾಯಿತು. ಅಂತಿಮವಾಗಿ 49.5 ಓವರ್ ನಲ್ಲಿ ಆಸಿಸ್ 315 ರನ್ ಗಳಿಗೆ ಆಲೌಟ್ ಆಯಿತು.
ಆಫ್ರಿಕಾ ಪರ ಕಾಗಿಸೋ ರಬಾಡಾ 3 ವಿಕೆಟ್ ಪಡೆದು ಮಿಂಚಿದರೆ, ಪ್ರಿಟೋರಿಯಸ್, ಫೆಹ್ಲುಕ್ವಾಯೊ ತಲಾ 2 ವಿಕೆಟ್ ಮತ್ತು ಕ್ರಿಸ್ ಮಾರಿಸ್, ಇಮ್ರಾನ್ ತಾಹಿರ್ ತಲಾ 1 ವಿಕೆಟ್ ಪಡೆದರು. ಇನ್ನು ಆಫ್ರಿಕಾ ಪರ 100 ರನ್ ಪೇರಿಸಿ ಬೃಹತ್ ರನ್ ಗೆ ಕಾರಣರಾದ ಫಾಫ್ ಡುಪ್ಲೆಸಿಸ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
SCROLL FOR NEXT