ಕ್ರಿಕೆಟ್

ಐಸಿಸಿ ವಿಶ್ವಕಪ್: ನಾಳೆ ಆಫ್ರಿಕಾ ವಿರುದ್ಧ ಭಾರತದ ಮೊದಲ ಫೈಟ್

Raghavendra Adiga
ಸೌಥ್‌ಹ್ಯಾಮ್ಟನ್‌: ಮೂರನೇ ವಿಶ್ವಕಪ್‌ ಗೆಲ್ಲುವ ಕನಸು ಕಟ್ಟಿಕೊಂಡಿರುವ ಟೀಂ ಇಂಡಿಯಾ  ಪ್ರಸ್ತತ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವಾಡಲು ಸಜ್ಜಾಗಿದೆ. ಆದರೆ, ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶದ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಫಾಫ್‌ ಡುಪ್ಲೇಸಿಸ್‌ ಬಳಗ ಗೆಲುವಿನ ಒತ್ತಡದಲ್ಲಿ ನಾಳಿನ ಪಂದ್ಯಕ್ಕೆ ಕಣಕ್ಕೆ ಇಳಿಯಲಿದೆ.
ಎರಡನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಪಡೆದಿದ್ದ ಭಾರತ, ವಿಶ್ವಕಪ್‌ ಪ್ರಧಾನ ಸುತ್ತಿನ ಮೊದಲ ಹಣಾಹಣಿಗೆ ಒಂದು ವಾರದ ಕಾಲ ಅಭ್ಯಾಸ ನಡೆಸಿ ಇದೀಗ ಸಜ್ಜಾಗಿ ನಿಂತಿದೆ. ನಾಯಕ ಕೊಹ್ಲಿ, ಕುಲ್ದೀಪ್ ಯಾದವ್‌ ಹಾಗೂ ಯಜುವೇಂದ್ರ ಚಾಹಲ್‌ ಇಬ್ಬರಿಗೂ ಅಂತಿಮ 11ರಲ್ಲಿ ಅವಕಾಶ ನೀಡಲಿದ್ದಾರೆಯೇ ಅಥವಾ ಜಸ್ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಜತೆಗೆ ಹೆಚ್ಚುವರಿ ವೇಗದ ಬೌಲರ್‌ ಆಗಿ ಭುವನೇಶ್ವರ್‌ ಕುಮಾರ್‌ ಅವರನ್ನು ಪರಿಗಣಿಸಲಿದ್ದಾರೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 
ಸ್ಪಿನ್‌ ಬೌಲಿಂಗ್‌ ಎದುರಿಸುವಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ ವಿಭಾಗ ಅಸಮರ್ಥವಾಗಿದೆ. ವಿಶೇಷವಾಗಿ ಕುಲ್ದೀಪ್‌ ಹಾಗೂ ಚಾಹಲ್‌ ಅವರನ್ನು ಎದುರಿಸುವುದು ಅವರಿಗೆ ಕಷ್ಟವಾಗಲಿದೆ. ಏಕೆಂದರೆ, ಕಳೆದ ವರ್ಷ ದಕ್ಷಿಣ ಆಫ್ರಿಕಾ ನೆಲದಲ್ಲಿ ಫಾಫ್‌ ಡುಪ್ಲೇಸಿಸ್‌ ಬ್ಯಾಟ್ಸ್‌ಮನ್‌ಗಳು ಕುಲ್ದೀಪ್‌ ಯಾಧವ್‌ ಹಾಗೂ ಯಜುವೇಂದ್ರ ಚಾಹಲ್‌ ಸ್ಪಿನ್‌ ಎದುರಿಸುವಲ್ಲಿ ವಿಫಲರಾಗಿದ್ದರು. ಆರು ಪಂದ್ಯಗಳಿಂದ ಕುಲ್ದೀಪ್‌ 17 ವಿಕೆಟ್‌ ಪಡೆದರೆ, ಚಾಹಲ್‌ 16 ವಿಕೆಟ್‌ ಕಬಳಿಸಿದ್ದರು. 
ಆಲ್ರೌಂಡರ್‌ ವಿಭಾಗದಲ್ಲಿ ಕೇದಾರ್‌ ಜಾಧವ್‌ ಅಥವಾ ವಿಜಯ್‌ ಶಂಕರ್‌ ಅವರಿಗೆ ಅವಕಾಶ ನೀಡುವ ಬಗ್ಗೆ ಕೊಹ್ಲಿ ಇನ್ನೂ ಗೊಂದಲದಲ್ಲಿದ್ದಾರೆ. ಕೇದಾರ್‌ ಮಧ್ಯಮ ಕ್ರಮಾಂಕದಲ್ಲಿ ನಾಲ್ಕು ಓವರ್‌ ಬೌಲಿಂಗ್‌ ಮಾಡಲು ಶಕ್ತರಾಗಿದ್ದು, ಶಂಕರ್‌ ಕೂಡ ವಿದೇಶಿ ಪಿಚ್‌ಗಳಲ್ಲಿ ತನ್ನ ಸಾಮಾರ್ಥ್ಯ ಸಾಬೀತುಪಡಿಸಲಿದ್ದಾರೆ. ಶಂಕರ್‌ ಗಿಂತ ಜಾಧವ್‌ ಬ್ಯಾಟಿಂಗ್‌ನಲ್ಲಿ ಅಗತ್ಯ ಸನ್ನಿವೇಶಗಳಲ್ಲಿ ಶಕ್ತಿಯುತ ಹೊಡೆತಗಳನ್ನು ಬಾರಿಸುವ ಕೌಶಲ ಮೈಗೂಡಿಸಿಕೊಂಡಿದ್ದಾರೆ. 
ಕಳೆದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ಜೋಡಿ ವೈಫಲ್ಯ ಅನುಭವಿಸಿರುವುದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿದೆ. ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶದ ವಿರುದ್ಧ ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ನೀಡುವಲ್ಲಿ ಇವರು ಎಡವಿದ್ದರು. ಆದರೂ, ನಾಯಕ ವಿರಾಟ್‌ ಕೊಹ್ಲಿ ಪ್ರಧಾನ ಸುತ್ತಿನಲ್ಲಿ ಈ ಜೋಡಿಯ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. 
ಬಾಂಗ್ಲಾ ವಿರುದ್ಧ ಕೆ.ಎಲ್‌ ರಾಹುಲ್‌ ಹಾಗೂ ಎಂ.ಎಸ್‌ ಧೋನಿ ಅವರು ತಲಾ ಎರಡು ಶತಕ ಸಿಡಿಸಿರುವುದು ಭಾರತ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ. 
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶದ ಎದುರು ಎರಡೂ ಪಂದ್ಯಗಳಲ್ಲಿ ಫಾಫ್‌ ಡುಪ್ಲೇಸಿಸ್‌ ಪಡೆ 300ಕ್ಕೂ ಹೆಚ್ಚು ರನ್‌ ಹೊಡೆಸಿಕೊಂಡಿತ್ತು. ಹಾಗಾಗಿ, ಈ ಎರಡೂ ಪಂದ್ಯಗಳನ್ನು ಕೈಚಿಲ್ಲಿಕೊಂಡಿತು. ಇದೀಗ ಯುವ ವೇಗಿ ಲುಂಗಿ ಎನ್‌ಗಿಡಿ ಗಾಯಗೊಂಡಿದ್ದು ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ. ಆದರೆ, ಭುಜದ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಡೇಲ್ ಸ್ಟೇಯ್ನ್‌ ಅವರು ನಾಳಿನ ಅಂತಿಮ 11ರಲ್ಲಿ ಆಡುವುದರ ಬಗ್ಗೆ ಇನ್ನೂ ಖಚಿತವಿಲ್ಲ. 
ಮೊದಲ ಪಂದ್ಯದಲ್ಲಿ ಆಫ್ರಿಕಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಗಮನಿಸಿದರೆ, ಬಾಂಗ್ಲಾದೇಶದ ಎದುರು ಬ್ಯಾಟಿಂಗ್‌ ವಿಭಾಗ ಸುಧಾರಣೆ ಕಂಡಿದೆ. ಆದರೆ, ಗೆಲುವು ಪಡೆಯುವಲ್ಲಿ ವಿಫಲವಾಗಿದೆ. ಆದರೆ, ಸತತ ಸೋಲಿನಿಂದ ನಿರಾಸೆ ಅನುಭವಿಸಿರುವ ಆಫ್ರಿಕಾ ನಾಳಿನ ಪಂದ್ಯದಲ್ಲಿ ಭಾರತದ ವಿರುದ್ಧ ಬಹಳ ಎಚ್ಚರಿಕೆಯಿಂದ ಆಡಲಿದೆ.
ಪ್ರಸ್ತುತ ಲಯ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಪಡೆಯುವುದು ಭಾರತಕ್ಕೆ ಸುಲಭವಲ್ಲ. ಏಕೆಂದರೆ ವಿಶ್ವಕಪ್‌ ದಾಖಲೆ ನೋಡಿದಾಗ ಉಭಯ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಭಾರತ ಕೇವಲ ಒಂದರಲ್ಲಿ ಗೆಲುವು ಪಡೆದು ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಟ್ಟಾರೆ ಬಲಾಬಲ ಗಮನಿಸಿದಾಗ ಆಫ್ರಿಕಾ 46-34 ಮುನ್ನಡೆ ಪಡೆದಿದೆ. 
ತಂಡಗಳು: 
ಭಾರತ: 
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ (ವಿ.ಕೀ), ಶಿಖರ್‌ ಧವನ್‌, ಕೆ.ಎಲ್ ರಾಹುಲ್‌, ದಿನೇಶ್‌ ಕಾರ್ತಿಕ್, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್, ರವೀಂದ್ರಾ ಜಡೇಜಾ. 
ದಕ್ಷಿಣ ಆಫ್ರಿಕಾ: 
ಫಾಫ್‌ ಡುಪ್ಲೇಸಿಸ್ ‌(ನಾಯಕ), ಐಡೆನ್‌ ಮಕ್ರಾಮ್‌, ಕ್ವಿಂಟನ್‌ ಡಿ ಕಾಕ್‌(ವಿ.ಕೀ), ಹಾಶೀಮ್‌ ಆಮ್ಲಾ, ರಾಸ್ಸಿ ವಾನ್‌ ಡೆರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಕ್ರಿಸ್‌ ಮೋರಿಸ್‌, ಆ್ಯಂಡಿಲೆ ಫೆಹ್ಲುಕ್ವಾಯೊ, ಜೆ.ಪಿ ಡುಮಿನಿ, ಡ್ವೈನ್‌ ಪ್ರೆಟೋರಿಯಸ್‌, ಡೇಲ್‌ ಸ್ಟೇಯ್ನ್‌, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಇಮ್ರಾನ್‌ ತಾಹಿರ್‌, ತಬ್ರೈಜ್ ಶಂಸಿ
ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ದಿ ರೋಸ್‌ ಬೌಲ್‌, ಸೌಥ್‌ಹ್ಯಾಮ್ಟನ್‌
SCROLL FOR NEXT