ಕ್ರಿಕೆಟ್

ಐಪಿಎಲ್ ಗೂ ವಿಶ್ವಕಪ್ ಟೂರ್ನಿಗೂ ಸಂಬಂಧವೇ ಇಲ್ಲ: ಟೀಂ ಇಂಡಿಯಾ ನಾಯಕ ಕೊಹ್ಲಿ

Srinivasamurthy VN
ಲಂಡನ್: ಐಪಿಎಲ್ ಟೂರ್ನಿಗೂ ವಿಶ್ವಕಪ್ ಟೂರ್ನಿಗೂ ಸಂಬಂಧವೇ ಇಲ್ಲ, ಆ ಮಾದರಿಯ ಕ್ರಿಕೆಟ್ ಬೇರೆ, ವಿಶ್ವಕಪ್ ಮಾದರಿಯ ಕ್ರಿಕೆಟ್ ಬೇರೆಯಾಗಿರುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಮೊದಲ ಪಂದ್ಯಕ್ಕೆ ಅಣಿಯಾಗಿರುವ ಭಾರತ ತಂಡ ಇಂದು ಸೌತಾಂಪ್ಟನ್ ನಲ್ಲಿ ಟೂರ್ನಿಯ ಮೊದರ ಪಂದ್ಯವನ್ನಾಡುತ್ತಿದೆ. ಪ್ರಸ್ತುತ ತಂಡದಲ್ಲಿರುವ ಎಲ್ಲ ಆಟಗಾರರೂ ಈ ಹಿಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಸಕಾರಾತ್ಮಕ ಅಂಶವಾದರೂ ಕಳೆದ ಐಪಿಎಲ್ ಟೂರ್ನಿಯಲ್ಲಿ ಕುಲದೀಪ್ ಯಾದವ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಈ ಕುರಿತಂತೆ ಇದೀಗ ಪ್ರಶ್ನೆಗಳು ಉದ್ಭವವಾಗಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್ ಅವರ ಫಾಮ್ ಕುರಿತಂತೆ ನಾನು ತಲೆ ಕೆಡಿಸಿಕೊಂಡಿಲ್ಲ. ಆದರೆ ಐಪಿಎಲ್ ಗೂ ವಿಶ್ವಕಪ್ ಟೂರ್ನಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು  ಹೇಳಿದ್ದಾರೆ.
ಐಪಿಎಲ್ ನಲ್ಲಿ ನನ್ನ ಪ್ರದರ್ಶನ ಉತ್ತಮವಾಗಿತ್ತು. ಹಾಗೆಂದ ಮಾತ್ರಕ್ಕೆ ವಿಶ್ವಕಪ್ ನಲ್ಲೂ ನನ್ನ ಪ್ರದರ್ಶನ ಉತ್ತಮವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಟೂರ್ನಿಗೂ ವ್ಯತ್ಯಾಸವಿರುತ್ತದೆ. ಈ ಹಿಂದಿನ ಟೂರ್ನಿಯ ಪ್ರದರ್ಶನವನ್ನು ಹಾಲಿ ಟೂರ್ನಿಗೆ ತಾಳೆಹಾಕಲು ಸಾಧ್ಯವಿಲ್ಲ. ಈ ಹಿಂದಿನ ಟೂರ್ನಿಯಲ್ಲಿ ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡು ನಾವು ಮುಂದಕ್ಕೆ ಹೋಗಬೇಕು. ಹೌದು.. ಐಪಿಎಲ್ ಟೂರ್ನಿಯಲ್ಲಿ ಮೂರು ನಾಲ್ಕು ಪಂದ್ಯಗಳಲ್ಲಿ ನಾವು ವಿಫಲರಾದರೆ ನಮ್ಮ ಮಾನಿಸಿಕ ಮತ್ತು ಬೌದ್ಧಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಈ ಹಿಂದಿನ ಟೂರ್ನಿಯ ಪ್ರದರ್ಶನವೇ ಹಾಲಿ ಟೂರ್ನಿಗೂ ಪರಿಗಣನೆಯಾಗುತ್ತದೆ ಎಂಬುದು ಸರಿಯಲ್ಲ, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ನಾವು ಯಶಸ್ಸು ಸಾಧಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.
SCROLL FOR NEXT