ಕ್ರಿಕೆಟ್

ಪಾಕ್ ಬಳಿಕ ಆಫ್ರಿಕಾ: ಐಸಿಸಿ ಟೂರ್ನಿಗಳಲ್ಲಿ ಆಫ್ರಿಕಾ ವಿರುದ್ಧವೂ ಭಾರತ ದಾಖಲೆ!

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದೇ ಇಲ್ಲ ಎಂಬ ದಾಖಲೆ ಹಸಿರಾಗಿರುವಂತೆಯೇ ಇಂತಹುದೇ ದಾಖಲೆಯನ್ನು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರೆಸಿದೆ.
ಹೌದು.. ನಿನ್ನೆ ಸೌಥ್ಯಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆದ ಆಫ್ರಿಕಾ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿ 2019ರಲ್ಲಿ ಭಾರತ ಶುಭಾರಂಭ ಮಾಡಿದೆ. ಅಂತೆಯೇ ಆಫ್ರಿಕಾ ವಿರುದ್ಧದ ತನ್ನ ಹಳೆಯ ದಾಖಲೆಯನ್ನು ಟೀಂ ಇಂಡಿಯಾ ಉತ್ತಮ ಪಡಿಸಿಕೊಂಡಿದೆ.
ಆ ಮೂಲಕ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ವಿಶೇಷ ದಾಖಲೆ ಬರೆದಿದ್ದು, ಐಸಿಸಿ ಆಯೋಜಿತ ಕೊನೆಯ ಆರು ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಸೋಲೇ ಕಂಡಿಲ್ಲ.
7 ವರ್ಷಗಳಿಂದ ಆಫ್ರಿಕಾ ವಿರುದ್ಧ ಭಾರತದ ಜೈತ್ರ ಯಾತ್ರೆ
2012ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಮೂಲಕ ಆರಂಭಗೊಂಡ ಭಾರತದ ಜೈತ್ರ ಯಾತ್ರೆ 2019 ವಿಶ್ವಕಪ್ ನಲ್ಲೂ ಮುಂದುವರೆದಿದೆ. 2012ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ರಿಕಾ ವಿರುದ್ಧ ಭಾರತ ತಂಡ ಕೇವಲ 1 ರನ್ ಗಳ ರೋಚಕ ಜಯ ದಾಖಲಿಸಿತ್ತು. ಬಳಿಕ 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾದವು. ಅಂದಿನ ಪಂದ್ಯದಲ್ಲೂ ಭಾರತ ತಂಡ ಆಫ್ರಿಕಾ ತಂಡವನ್ನು 26 ರನ್ ಗಳ ಅಂತರದಲ್ಲಿ ಮಣಿಸಿತ್ತು.
ಇದಾದ ಬಳಿಕ 2014ರ ಟಿ20 ವಿಶ್ವಕಪ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅಂದೂ ಕೂಡ ಭಾರತ ತಂಡ ಆಫ್ರಿಕಾ ವಿರುದ್ಧ 6 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿತ್ತು. 2015ರ ವಿಶ್ವಕಪ್ ನಲ್ಲೂ ಆಫ್ರಿಕಾ ತಂಡವನ್ನು ಭಾರತ ತಂಡ ಬರೊಬ್ಬರಿ 130 ರನ್ ಗಳ ಅಂತರದಲ್ಲಿ ಮಣಿಸಿತ್ತು. ಇದಾದ ಬಳಿಕ 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಭಾರತ ತಂಡ ಆಫ್ರಿಕಾ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. 
ಇನ್ನು ನಿನ್ನೆಯ ಪಂದ್ಯದಲ್ಲೂ ಭಾರತ ತಂಡ ಆಫ್ರಿಕಾ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಸತತ 6 ಐಸಿಸಿ ಟೂರ್ನಿಗಳಲ್ಲಿ ಆಫ್ರಿಕಾ ವಿರುದ್ಧ ತನ್ನ ಜೈತ್ರ ಯಾತ್ರೆ ಮುಂದುವರೆಸಿಕೊಂಡು ಬಂದಿದೆ.
SCROLL FOR NEXT