ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ದಕ್ಷಿಣ ಆಫ್ರಿಕಾ

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ದಕ್ಷಿಣ ಆಫ್ರಿಕಾ ತಂಡ ಹೀನಾಯ ದಾಖಲೆಯೊಂದನ್ನು ಬರೆದುಕೊಂಡಿದೆ.
ನಿನ್ನೆ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆದ ತನ್ನ ಮೂರನೇ ಏಕದಿನ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಆಫ್ರಿಕನ್ನರು ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ದ ನಡೆದಿದ್ದ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ತನ್ನ ಮೂರನೇ ಪಂದ್ಯವನ್ನೂ ಸೋಲು ಮೂಲಕ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ ಮೂರು ಪಂದ್ಯಗಳನ್ನು ಸೋತ ಕಳಪೆ ದಾಖಲೆ ಬರೆದಿದೆ.
ಈ ಹಿಂದೆ ಇಂಗ್ಲೆಂಡ್ ವಿರುದ್ಧದ ತನ್ನ ಆರಂಭಿಕ ಪಂದ್ಯವನ್ನಾಡಿದ್ದ ಆಫ್ರಿಕನ್ನರು 104 ರನ್ ಗಳ ಅಂತರದಲ್ಲಿ ಹೀನಾಯವಾಗಿ ಇಂಗ್ಲೆಂಡ್ ಶರಣಾಗಿದ್ದರು. ಬಳಿಕ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿಯೂ 21 ರನ್ ಗಳ ಅಂತರದ ಸೋಲು ಕಂಡಿದ್ದರು.
ದಕ್ಷಿಣ ಆಫ್ರಿಕಾ ತಂಡ ಈ ವರೆಗೂ 11 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು ಯಾವುದೇ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರಲಿಲ್ಲ. ಆದರೆ ಪ್ರಬಲ ತಂಡವಾಗಿ ಹೊರಹೊಮ್ಮಿತ್ತು, ಆದರೆ ಹಾಲಿ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಬಾಂಗ್ಲಾದೇಶದ ವಿರುದ್ಧವೂ ಸೋಲು ಕಂಡು ಮುಜುಗರಕ್ಕೀಡಾಗಿದ್ದ ಆಫ್ರಿಕಾ ಇದೀಗ ಭಾರತದ ವಿರುದ್ಧವೂ ಸೋತು ತೀವ್ರ ಮುಖಭಂಗಕ್ಕೀಡಾಗಿದೆ. ಅಂತೆಯೇ ಅಂಕ ಪಟ್ಟಿಯಲ್ಲೂ ಆಫ್ರಿಕಾ ತಂಡ ಕೆಳಗೆ ಕುಸಿದಿದ್ದು, 10ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು ಮೂರು ಪಂದ್ಯಗಳನ್ನಾಡಿರುವ ಆಫ್ರಿಕಾ ಮೂರು ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ ಇನ್ನೂ ಖಾತೆಯನ್ನೇ ತೆರೆದಿಲ್ಲ. -0.952 ನೆಟ್ ರನ್ ರೇಟ್ ಹೊಂದಿರುವ ಆಫ್ರಿಕನ್ನರು ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
SCROLL FOR NEXT