ಕ್ರಿಕೆಟ್

ದೇಶಕ್ಕಿಂತ ಹಣ ಗಳಿಕೆ ಬಗ್ಗೆ ಅಪಾರ ಕಾಳಜಿ: ಎಬಿಡಿಗೆ ಶೋಯೆಬ್‌ ಅಖ್ತರ್ ತಿರುಗೇಟು

Nagaraja AB
ಲಂಡನ್: ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಅವರಿಗೆ ದೇಶ ಪ್ರತಿನಿಧಿಸುವುದಕ್ಕಿಂತ ಹಣ ಗಳಿಕೆ ಬಗ್ಗೆ ಅಪಾರ ಕಾಳಜಿ ಇದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್‌ ಅಖ್ತರ್ ತಿರುಗೇಟು ನೀಡಿದ್ದಾರೆ. 
"ವಿಶ್ವಕಪ್‌ ಟೂರ್ನಿಗೆ ಲಭ್ಯರಾಗಲು ಐಪಿಎಲ್‌ ಹಾಗೂ ಪಿಎಸ್‌ಎಲ್‌ ಟೂರ್ನಿಗಳನ್ನು ತೊರೆಯಬೇಕಾದ ಅನಿವಾರ್ಯತೆಯ ಒತ್ತಡ ಎದುರಾಯಿತು. ಈ ವೇಳೆ ಎಬಿಡಿ ಐಪಿಎಲ್‌ ಹಾಗೂ ಪಿಎಸ್‌ಎಲ್‌ ಟೂರ್ನಿಗಳನ್ನು ಆಯ್ಕೆ ಮಾಡಿಕೊಂಡರು.ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದನ್ನು ಜನತೆ ಮರೆಯಬಾರದು ಎಂದು ಅಕ್ತರ್‌ ವಿಡಿಯೋ ಮೂಲಕ ತಿಳಿಸಿದ್ದಾರೆ. 
ಪ್ರಸಕ್ತ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎಬಿಡಿ ತಂಡದಲ್ಲಿ ಇರಬೇಕಾಗಿತ್ತು ಎಂದು ಸೋಲಿನ ಬಳಿಕ ಎಲ್ಲರಿಗೂ ಅರಿವಾಯಿತು. ಆದರೆ, ಎಬಿಡಿ 2018ರ ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
"ಎಲ್ಲರಿಗೂ ಹಣ ಮುಖ್ಯ ಎಂಬುದು ನನಗೆ ಗೊತ್ತು. ಕಳೆದ ಒಂದು ವರ್ಷದ ಹಿಂದೆ ದಕ್ಷಿಣ ಆಫ್ರಿಕಾ ತಂಡ ಕಳಪೆ ಲಯದಲ್ಲಿತ್ತು. ವಿಶ್ವಕಪ್‌ ಆರಂಭವಾಗಲು ಇನ್ನೂ ಒಂದು ವರ್ಷ ಅವಧಿ ಇತ್ತು. ಈ ವೇಳೆ ಡಿವಿಲಿಯರ್ಸ್‌ ತಂಡಕ್ಕೆ ಅತ್ಯಂತ ಮುಖ್ಯವಾಗಿತ್ತು. ಈ ವಿಷಯ ಅವರಿಗೂ ಗೊತ್ತಿತ್ತು. ಆದರೂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
 ಹಣ ಇಂದು ಅಥವಾ ನಾಳೆ ಬರುತ್ತದೆ. ಆದರೆ, ವಿಶ್ವಕಪ್‌ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವುದು ಸೀಮಿತ ಅವಧಿಯಲ್ಲಿ ಮಾತ್ರ. ಇದನ್ನು ಬಿಟ್ಟು ಎಬಿಡಿ ಹಣ ಗಳಿಕೆಯ ಕಡೆ ಗಮನ ಹರಿಸಿದರು ಎಂದು ಅಕ್ತರ್‌ ದೂರಿದ್ದಾರೆ 
"ಹಣ ಗಳಿಸುವ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ, ಹಣ ಗಳಿಕೆಯ ಹಾದಿ ಸರಿಯಾಗಿರಬೇಕು. ದೇಶ ಪ್ರತಿನಿಧಿಸುವುದಕ್ಕೆ ಮೊದಲು ಆದ್ಯತೆ ನೀಡಿ. ನಂತರ ಹಣ ಗಳಿಕೆಗೆ ಪ್ರಾಶಸ್ತ್ಯ ನೀಡಿ" ಎಂದು ಪಾಕ್‌ ಮಾಜಿ ವೇಗಿ ಹೇಳಿದ್ದಾರೆ.
SCROLL FOR NEXT