ಕ್ರಿಕೆಟ್

ದ್ವಿಪಕ್ಷೀಯ ಸರಣಿ ಆಡುವಂತೆ ಭಾರತವನ್ನು ಬೇಡುವುದಿಲ್ಲ: ಪಿಸಿಬಿ

Srinivasamurthy VN
ಲಾಹೋರ್‌: ಪಾಕಿಸ್ತಾನ ತಂಡದೊಂದಿಗೆ ದ್ವಿಪಕ್ಷೀಯ ಸರಣಿ ಆಡುವಂತೆ ಭಾರತವನ್ನು ಎಂದೂ ಬೇಡಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಎಹ್ಸಾನ್ ಮಣಿ ಹೇಳಿದ್ದಾರೆ.
"ನಾವು ಭಾರತ ಅಥವಾ ಬೇರೆ ಯಾವ ದೇಶವನ್ನೂ ನಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡುವಂತೆ ಬೇಡಿಕೊಳ್ಳುವುದಿಲ್ಲ. ಆದರೆ, ನಾವು ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಯೋಗ್ಯ ಮತ್ತು ಘನತೆಯ ರೀತಿಯಲ್ಲಿ ಪುನರಾರಂಭಿಸಲು ಬಯಸುತ್ತೇವೆ " ಎಂದು ಗುರುವಾರ ಗಾಡ್ಡಾಫಿ ಕ್ರೀಡಾಂಗಣದಲ್ಲಿ ಮಣಿ ತಿಳಿಸಿರುವುದನ್ನು 'ಡಾನ್‌' ವರದಿ ಮಾಡಿದೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮೊದಲ ಪಂದ್ಯದಲ್ಲಿ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಧರಿಸಿದ್ದ ಭಾರತೀಯ ಸೇನೆಯ ಬಲಿದಾನದ ಲೋಗೋ ಧರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಣಿ ನಮಗೆ ಅಂತಹ ಯಾವುದೇ ಸೂಚಕಗಳೂ ಬೇಕಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಕ್ರಿಕೆಟ್ ಒಂದು ಜೆಂಟಲ್ ಮನ್ ಕ್ರೀಡೆಯಾಗಿದ್ದು, ಅದು ಹೇಗಿದೆಯೋ ಹಾಗೆಯೇ ಆಡಬೇಕು. ಕ್ರೀಡೆ ದೇಶ-ದೇಶಗಳನ್ನು ಬೆಸೆಯುವ ಕೊಂಡಿಯಾಗಬೇಕೇ ಹೊರತು ನಮ್ಮ ನಡವಳಿಕೆಯಿಂದ ಸ್ನೇಹಭಾವಕ್ಕೆ ಧಕ್ಕೆಯಾಗಬಾರದು ಎಂದು ಹೇಳಿದ್ದಾರೆ. 
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಪ್ರಸಾರವಾಗಿದ್ದ ವಿವಾದಿತ ಜಾಹಿರಾತು ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಮಣಿ, ವಿಶ್ವಕಪ್ ಟೂರ್ನಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಪ್ರಸಾರ ಮಾಡುತ್ತಿರುವುದು ಸ್ಟಾರ್ ಸಂಸ್ಥೆ. ಅದು ಭಾರತದ್ದೂ ಅಲ್ಲ, ಹಾಗೆಯೇ ಪಾಕಿಸ್ತಾನಕ್ಕೆ ಸಂಬಂಧಿಸಿದ್ದೂ.. ಐಸಿಸಿ ಇದರ ಮೇಲ್ವಿಚಾರಣೆ ನಡೆಸುತ್ತಿದೆ. ಜಾಹಿರಾತಿನಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ರ ಸ್ಪೂಫ್ ಮಾಡಿರುವುದು ನಮಗೆ ಸಂಬಂಧ ಪಟ್ಟ ವಿಚಾರವಲ್ಲ. ಐಸಿಸಿ ಈ ಬಗ್ಗೆಸ್ಪಷ್ಟ ನಿಲುವು ತಳೆಯಬೇಕು. ಯಾವುದೇ ತಂಡವಾಗಿರಲಿ ಒಂದೆ ತೆರನಾಗಿ ಕಾಣಬೇಕು. ಇಂತಹ ಜಾಹಿರಾತುಗಳು ಖಂಡಿತಾ ಕ್ರೀಡಾಸ್ಪೂರ್ತಿಯಿಂದ ಕೂಡಿದ್ದಲ್ಲ ಎಂದು ಹೇಳಿದ್ದಾರೆ.
ಇದೇ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಎದುರಾಗುತ್ತಿವೆ.
SCROLL FOR NEXT