ಕ್ರಿಕೆಟ್

ಪಾಕಿಸ್ತಾನಕ್ಕಿಂತ ಭಾರತವೇ ಅತ್ಯಂತ ಬಲಿಷ್ಟ ತಂಡ, ಧೋನಿ ದೇಶ ಪ್ರೇಮಕ್ಕೆ ನನ್ನ ಸಲಾಂ: ಕಪಿಲ್ ದೇವ್‌

Srinivasamurthy VN
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅತ್ಯಂತ ಹೈ ವೋಲ್ಟೇಜ್ ಕದನ ಎಂದೇ ಹೇಳಾಗುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ತಂಡ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತ ತಂಡ ನಾಳಿನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ಪ್ರಬಲ ಹೋರಾಟ ನಡೆಸಿ ಗೆಲುವು ಸಾಧಿಸಲಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಕಪಿಲ್ ದೇವ್ ಅವರು, 'ತಾವೊಬ್ಬ ಭಾರತೀಯನಾಗಿ ಈ ಮಾತು ಹೇಳುತ್ತಿಲ್ಲ. ಪಾಕಿಸ್ತಾನ ತಂಡಕ್ಕಿಂತ ಭಾರತ ಬಲಿಷ್ಟವಾಗಿದೆ. ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮವಾಗಿದೆ. ಒಂದು ವೇಳೆ ಪಾಕ್ ವಿರುದ್ಧ ಭಾರತ 10 ಪಂದ್ಯಗಳಲ್ಲಿ ಆಡಿದ್ದೇ ಆದಲ್ಲಿ ಅದರಲ್ಲಿ ಏಳು ಪಂದ್ಯಗಳಲ್ಲಿ ಖಂಡಿತ ಜಯ ಸಾಧಿಸಲಿದೆ. ಆದರೆ, ಭಾನುವಾರದ ಪಂದ್ಯ ಏನಾಗುತ್ತದೆ ಎಂದು ಭಗವಂತನಿಗೇ ಗೊತ್ತು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಹಾಲಿ ತಂಡಕ್ಕಿಂತ ನಾನು ಆಡಿದ್ದ ಪಾಕಿಸ್ತಾನ ತಂಡ ಬಲಿಷ್ಟವಾಗಿತ್ತು. ಆದರೆ ಆ ಬಳಿಕ ಆ ತಂಡಕ್ಕೆ ಏನಾಯಿತು ಎಂಬುದು ಆ ದೇವರಿಗೇ ಗೊತ್ತು ಎಂದು ಕಪಿಲ್ ಹೇಳಿದ್ದಾರೆ. 
ಕೊಹ್ಲಿ, ಬುಮ್ರಾ ನಂಬರ್ 1 ಆಟಗಾರರು
ಇನ್ನು ಭಾರತ ತಂಡದ ಆಟಗಾರರ ಕುರಿತು ಮಾತನಾಡಿದ ಕಪಿಲ್ ದೇವ್, 'ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ನನ್ನೊಂದಿಗೆ ಹೋಲಿಕೆ ಮಾಡಲ್ಲ. ಅವರು ಅದ್ಭುತ ಆಟಗಾರ ಜತೆಗೆ ವಿಶ್ವದ ನಂ.1 ಆಟಗಾರ. ನಮ್ಮ ತಂಡಕ್ಕೆ ಕೊಹ್ಲಿ ನಾಯಕನಾಗಿರುವುದು ನಮ್ಮ ಹೆಮ್ಮೆ" ಎಂದು ತಿಳಿಸಿದರು. ಅಂತೆಯೇ ಬೌಲಿಂಗ್ ವಿಭಾಗದಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ರನ್ನು ಕೊಂಡಾಡಿದ ಕಪಿಲ್ ದೇವ್, ವಿಶ್ವದ ನಂಬರ್ ಬೌಲರ್ ಆತ. ಆತ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಗ ಬೇಕಾದ ಯಶಸ್ಸಿನ ಹಾದಿ ತುಂಬಾ ಇದೆ ಎಂದು ಹೇಳಿದರು.
ಕಳೆದ 15 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಸಾಕಷ್ಟು ಸಾಧನೆ ಮಾಡಿದೆ. ಭಾರತೀಯ ಬೌಲಿಂಗ್ ವಿಭಾಗ ಸಾಕಷ್ಟು ಸುಧಾರಿಸಿದ್ದು, ಇಂದು ವಿಶ್ವದ ಯಾವುದೇ ತಂಡಕ್ಕೂ ಸವಾಲೊಡ್ಡುವ ಹಂತಕ್ಕೆ ಬೆಳೆದಿದೆ. ಸಾಕಷ್ಚು ವರ್ಷಗಳ ಬಳಿಕ ಕ್ರಿಕೆಟ್ ನಲ್ಲಿ ಬೌಲರ್ ಗಳಿಂದ ಮ್ಯಾಚ್ ವಿನ್ ಆಗುತ್ತಿರುವ ಸುದ್ದಿ ಕೇಳುತ್ತಿದ್ದೇವೆ. ಆಡಿದ ಎರಡೇ ಪಂದ್ಯದಲ್ಲಿ ಬುಮ್ರಾ 5 ವಿಕೆಟ್ ಪಡೆದಿದ್ದಾರೆ. ಬುಮ್ರಾರನ್ನು ನಾನು ಮೊದಲಿಗೆ ನೋಡಿದಾಗ ಈತನಲ್ಲಿ ಇಂತಹ ಸಾಮರ್ಥ್ಯವಿದೆ ಎಂದು ನನಗೆ ಅನ್ನಿಸಿರಲಿಲ್ಲ. ಆದರೆ ಆತ ನಿಜಕ್ಕೂ ಅದ್ಭುತ ಬೌಲರ್... ಮುಂದಿನ ಐದು ವರ್ಷಗಳ ಕಾಲ ಆತ ಫಿಟ್ ಆಗಿರಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಧೋನಿ ದೇಶ ಪ್ರೇಮಕ್ಕೆ ನನ್ನ ಸಲಾಂ
ಇದೇ ವೇಳೆ ಧೋನಿ ಕೀಪಿಂಗ್ ಗ್ಲೌಸ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಪಿಲ್ ದೇವ್, ಈ ವಿಚಾರದಲ್ಲಿ ನಾನು ಧೋನಿ ಪರವಾಗಿ ನಿಲ್ಲುತ್ತೇನೆ. ಐಸಿಸಿ ಇದನ್ನು ನಿಯಮ ಬಾಹಿರ ಎಂದು ಕರೆದಿರಬಹದು. ಆದರೆ ಇದು ಯಾವುದೇ ರೀತಿಯ ವಿವಾದವಾಗಿರಲಿಲ್ಲ. ಬಹುಶಃ ಧೋನಿ ಕೂಡ ಅವರ ಗ್ಲೌಸ್ ವಿಚಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತದೆ ಎಂದು ಭಾವಿಸಿರುವುದಿಲ್ಲ. ಆದರೆ ಅವರ ದೇಶ ಪ್ರೇಮವನ್ನು ನಾನ್ನು ನೆಚ್ಚಿಕೊಳ್ಳುತ್ತೇನೆ. ಅವರ ದೇಶ ಪ್ರೇಮ ಮತ್ತು ಸೈನಿಕರ ಮೇಲಿನ ಪ್ರೀತಿಗೆ ನನ್ನ ಸಲಾಂ ಎಂದು ಕಪಿಲ್ ದೇವ್ ಹೇಳಿದ್ದಾರೆ.
SCROLL FOR NEXT