ಕ್ರಿಕೆಟ್

ಭಾರತದ ವಿರುದ್ಧ ಸೋಲು, ಪಾಕ್ ತಂಡದ ಕೋಚ್ ಮಿಕ್ಕಿ ಆರ್ಥರ್ ತಲೆದಂಡ?

Srinivasamurthy VN
ಇಸ್ಲಾಮಾಬಾದ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ವಿರುದ್ಧ ಸೋಲು ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ವ್ಯಾಪಕ ಚಟುವಟಿಕೆಗಳಿಗೆ ಕಾರಣವಾಗಿದ್ದು, ಇದೀಗ ಪಾಕಿಸ್ತಾನ ತಂಡದ ಪ್ರಧಾನ ಕೋಚ್ ಮಿಕ್ಕಿ ಆರ್ಥರ್ ತಲೆದಂಡದ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಮೂಲಗಳ ಪ್ರಕಾರ ಭಾರತದ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪಿಸಿಬಿ, ತಂಡದಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ತಂಡದ ಪ್ರಧಾನ ಕೋಚ್ ಮಿಕ್ಕಿ ಆರ್ಥರ್ ತಲೆದಂಡಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪಿಸಿಬಿ ಮಿಕ್ಕಿ ಆರ್ಥರ್ ಅವರ ಒಪ್ಪಂದವನ್ನು ನವೀಕರಿಸದಿರಲು ಪಿಸಿಬಿ ನಿರ್ಧರಿಸಿದೆ ಎನ್ನಲಾಗಿದೆ. 
ಇಂದು ಲಾಹೋರ್ ನಲ್ಲಿ ಪಿಸಿಬಿ ಆಡಳಿತಮಂಡಳಿ ಸಭೆ ಕರೆದಿದ್ದು, ಸಭೆಯಲ್ಲಿ ತಂಡದಲ್ಲಿ ಮಾಡಬೇಕಾದ ಮಹತ್ವದ ಬದಲಾವಣೆಗಳ ಕುರಿತು ಚರ್ಚಿಸಲಾಗುತ್ತದೆ. ಪಾಕ್ ಮಾಧ್ಯಮಗಳು ವರದಿ ಮಾಡಿರುವಂತೆ ತಂಡದ ನಿರ್ವಹಣಾ ಮಂಡಳಿ, ತರಬೇತಿ ಸಿಬ್ಬಂದಿ ಹಾಗೂ ತಂಡದಲ್ಲಿ ಕೆಲ ಮಹತ್ತರ ಬದಲಾವಣೆ ತರಲು ಪಿಸಿಬಿ ಆಲೋಚನೆಯಲ್ಲಿದೆ ಎನ್ನಲಾಗಿದೆ.
ಇಂದಿನ ಸಭೆಗಾಗಿಯೇ ವಿದೇಶ ಪ್ರವಾಸದಲ್ಲಿದ್ದ ಪಿಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ವಸೀಮ್ ಖಾನ್ ಅವರು ಇಂದು ತುರ್ತಾಗಿ ಲಾಹೋರ್ ಗೆ ಆಗಮಿಸಿದ್ದಾರೆ. 
ಆಯ್ಕೆ ಸಮಿತಿ ಮಾತ್ರವಲ್ಲ ನಾಯಕತ್ವದಲ್ಲೂ ಬದಲಾವಣೆ
ಇನ್ನು ಕೆಲ ಮಾಧ್ಯಮಗಳು ವರದಿ ಮಾಡಿರುವಂತೆ ಪಿಸಿಬಿ ಆಯ್ಕೆ ಸಮಿತಿಯಲ್ಲೂ ಬದಲಾವಣೆ ತರಲು ನಿರ್ಧರಿಸಿದ್ದು, ಅಷ್ಟು ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ನಾಯಕತ್ವ ಬದಲಾವಣೆ ಕುರಿತೂ ಗಂಭೀರವಾಗಿ ಚಂತಿಸುತ್ತಿದೆ ಎನ್ನಲಾಗಿದೆ.
SCROLL FOR NEXT