ಕ್ರಿಕೆಟ್

ತವರಿನಲ್ಲಿ ಭಾರತ ವಿರುದ್ಧದ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕ್ರಿಸ್ ಗೇಲ್ ನಿವೃತ್ತಿ

Nagaraja AB
ಲಂಡನ್ : ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಸ್ವದೇಶದಲ್ಲಿ ನಡೆಯಲಿರುವ ಏಕದಿನ ಹಾಗೂ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.
ವಿಶ್ವಕಪ್ ಕ್ರಿಕೆಟ್ ನಂತರ ನಿವೃತ್ತಿಯಾಗುವುದಾಗಿ 39 ವರ್ಷದ ದೈತ್ಯ ಆಟಗಾರ ಕ್ರಿಸ್ ಗೇಲ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಆದರೆ,  ಭಾರತ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನಸ್ಸನ್ನು ಬದಲಾಯಿಸಿಕೊಂಡಿದ್ದು, ವಿಶ್ವಕಪ್ ನಂತರವೂ ಪಂದ್ಯ ಆಡುವುದಾಗಿ ಹೇಳಿದ್ದಾರೆ.  ಭಾರತ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಖಂಡಿತವಾಗಿ ಆಡುತ್ತೇನೆ. ಆದರೆ, ಟಿ-20 ಪಂದ್ಯಗಳಲ್ಲಿ ಆಡುವುದಿಲ್ಲ ಎಂದಿದ್ದಾರೆ.
ಭಾರತ ವಿರುದ್ಧದ ಪಂದ್ಯವೇ ಕ್ರಿಸ್ ಗೇಲ್ ಅವರಿಗೆ ಕೊನೆಯ ಪಂದ್ಯವಾಗಲಿದೆ ಎಂದು ವೆಸ್ಟ್ ಇಂಡೀಸ್ ಮಾಧ್ಯಮ ಮ್ಯಾನೇಜರ್ ಫಿಲಿಪ್ ಸ್ಪೂನರ್ ಕೂಡಾ ಸ್ಪಷ್ಟಪಡಿಸಿದ್ದಾರೆ. 
ಈ ಸರಣಿಯಲ್ಲಿ ಭಾರತ ಮೂರು ಟಿ-20, ಮೂರು ಏಕದಿನ ಹಾಗೂ ಕೆಲ ಟೆಸ್ಟ್ ಪಂದ್ಯಗಳನ್ನಾಡಲಿದೆ ಆಗಸ್ಟ್ 3 ರಿಂದ ಟಿ-20 ಪಂದ್ಯಗಳು ಆರಂಭವಾಗಲಿವೆ. ಆಗಸ್ಟ್ 8 ರಿಂದ ಏಕದಿನ ಹಾಗೂ ಆಗಸ್ಟ್ 22 ರಿಂದ ಸೆಪ್ಟೆಂಬರ್ 3 ರವರೆಗೆ ಟೆಸ್ಟ್ ಪಂದ್ಯಗಳು ನಡೆಯಲಿವೆ.
103 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ರಿಸ್ ಗೇಲ್ 42. 19 ಸರಾಸರಿಯಲ್ಲಿ 7215 ರನ್ ಗಳಿಸಿದ್ದಾರೆ. 294 ಏಕದಿ ಪಂದ್ಯಗಳಲ್ಲಿ 10345 ಹಾಗೂ 58 ಟಿ-20 ಪಂದ್ಯಗಳಲ್ಲಿ 1627 ರನ್ ಗಳಿಸಿದ್ದಾರೆ.  ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಅಭಿಮಾನಿಗಳಿಂದ ಯೂನಿವರ್ಸ್ ಬಾಸ್ ಎಂದು ಕರೆಸಿಕೊಳ್ಳುತ್ತಾರೆ.
SCROLL FOR NEXT