ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ದಾಖಲೆ ಬರೆದ ಆಸಿಸ್ ವೇಗಿ ಮಿಚೆಲ್‌ ಸ್ಟಾರ್ಕ್‌!

Srinivasamurthy VN
ಲಂಡನ್‌: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮಿಚೆಲ್‌ ಸ್ಟಾರ್ಕ್‌ ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಸರಣಿ ವಿಕೆಟ್ ಕಬಳಿಸುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.
ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಮಾರಕ ದಾಳಿ ನಡೆಸಿ ಆಸ್ಟ್ರೇಲಿಯಾ ಗೆಲುವಿಗೆ ನೆರವಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಐಸಿಸಿ ವಿಶ್ವಕಪ್‌ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಜಂಟಿ ಮೊದಲನೇ ಸ್ಥಾನ ಅಲಂಕರಿಸಿದ್ದಾರೆ. ವೈಯುಕ್ತಿಕ 15 ವಿಕೆಟ್‌ಗಳೊಂದಿಗೆ ಲಾರ್ಡ್ಸ್ ಅಂಗಳಕ್ಕೆ ಆಗಮಿಸಿದ ಮಿಚೆಲ್‌ ಸ್ಟಾರ್ಕ್‌, ಜೋ ರೂಟ್‌, ಇಯಾನ್‌ ಮಾರ್ಗನ್‌, ಬೆನ್‌ ಸ್ಟೋಕ್ಸ್‌ ಹಾಗೂ ಆದಿಲ್‌ ರಶೀದ್‌ ಸೇರಿ ಒಟ್ಟು ನಾಲ್ಕು ವಿಕೆಟ್‌ ಕಬಳಿಸಿದರು.  ಆ ಮೂಲಕ ಒಟ್ಟಾರೆ ಅವರ ಖಾತೆಗೆ 19 ವಿಕೆಟ್‌ ಸೇರ್ಪಡೆಯಾದವು. 
ಇದರೊಂದಿಗೆ 16 ವಿಕೆಟ್‌ ಪಡೆದಿರುವ ಇಂಗ್ಲೆಂಡ್‌ ತಂಡದ ವೇಗಿ ಜೊಫ್ರಾ ಆರ್ಚರ್‌ ಅವರನ್ನು ಹಿಂದಿಕ್ಕಿದರು. ಇಂಗ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ಅಂತಿಮವಾಗಿ 29 ವರ್ಷದ ವೇಗಿ 8.4 ಓವರ್‌ಗಳಿಗೆ 43 ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿದರು. 2015ರ ಆವೃತ್ತಿಯಲ್ಲೂ ಸ್ಟಾರ್ಕ್‌ ಒಟ್ಟು 22 ವಿಕೆಟ್‌ ಕಬಳಿಸಿದ್ದರು. ಆ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್‌ ಬೌಲ್ಟ್‌ ಜತೆ ಹಂಚಿಕೊಂಡಿದ್ದರು.
SCROLL FOR NEXT