ಕ್ರಿಕೆಟ್

ವಿಶ್ವಕಪ್ ಕ್ರಿಕೆಟ್: ಬಾಬರ್ ಶತಕದ ನೆರವಿನಿಂದ ಕಿವೀಸ್ ಸೋಲಿಸಿದ ಪಾಕಿಸ್ತಾನ, ಸೆಮೀಸ್ ಆಸೆ ಜೀವಂತ

Nagaraja AB
ಬರ್ಮಿಂಗ್ ಹ್ಯಾಮ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬಾಬರ್ ಅಜಾಮ್  ಅವರ ಶತಕದ ನೆರವಿನಿಂದ ಪಾಕಿಸ್ತಾನ ನ್ಯೂಜಿಲ್ಯಾಂಡ್ ವಿರುದ್ಧ ಆರು ವಿಕೆಟ್ ಗಳ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನೂಂದೆಡೆ ಮೊದಲ ಸೋಲಿನ ರುಚಿ ಅನುಭವಿಸಿರುವ ನ್ಯೂಜಿಲ್ಯಾಂಡ್ ಒಟ್ಟು 11 ಅಂಕಗಳನ್ನು ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್  ಜೇಮ್ಸ್ ನೀಶಮ್  97, ಕಾಲಿನ್ ಡಿ ಗ್ರ್ಯಾಂಡ್ ಹೋಮ್ 64 ಹಾಗೂ ಕೇನ್ ವಿಲಿಯಮ್ಸ್ ಅವರ 41 ರನ್ ಗಳ  ನೆರವಿನ ಹೊರತಾಗಿಯೂ ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 237 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೆಲುವಿನ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಬಾಬರ್ ಅಜಾಬ್ 101 ಹಾಗೂ ಹ್ಯಾರಿಸ್ ಸೊಹೈಲ್ ಅವರ 64 ರನ್ ಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾದ ಬಾಬರ್ ಅಜಾಮ್ ಹಾಗೂ ಹ್ಯಾರಿಸ್ ಸೊಹೈಲ್ ಕಿವೀಸ್ ಕೈಯಿಂದ ಪಂದ್ಯವನ್ನು  ಸಂಪೂರ್ಣವಾಗಿ ಕಸಿದುಕೊಂಡರು. 
 ಈ ನಡುವೆ ಗೆಲುವಿನಂಚಿನಲ್ಲಿ ಹ್ಯಾರಿಸ್ ಸೊಹೈಲ್ ರನೌಟ್ ಗೆ ಬಲಿಯಾದರು. ನಂತರ ಬಂದ  ನಾಯಕ ಸರ್ಫರಾಜ್ ಅಹ್ಮದ್ 5 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಇನ್ನೂ ಐದು ಎಸೆತಗಳು ಬಾಕಿ ಉಳಿದಿರುವಂತೆಯೇ 49.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಪಾಕಿಸ್ತಾನ ಗೆಲುವು ದಾಖಲಿಸುವ ಮೂಲಕ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
SCROLL FOR NEXT