ಕ್ರಿಕೆಟ್

ವಿವಾದಕ್ಕೆ ಗುರಿಯಾಯ್ತು ಟೀಂ ಇಂಡಿಯಾ ಹೊಸ ಜರ್ಸಿ: ವಿಪಕ್ಷಗಳಿಂದ ಭಾರೀ ಟೀಕೆ, ಐಸಿಸಿ ತಿರುಗೇಟೇನು?

Vishwanath S
ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು ಈ ಮಧ್ಯೆ ಟೀಂ ಇಂಡಿಯಾದ ಹೊಸ ಜರ್ಸಿ ಇದೀಗ ವಿವಾದಕ್ಕೆ ಕಾರಣವಾಗಿದ್ದು ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿಯನ್ನು ಧರಿಸಿ ಮೈದಾನಕ್ಕೆ ಇಳಿಯಲಿದೆ. ಇನ್ನು ಕೇಸರಿ ಬಣ್ಣದ ಜರ್ಸಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.
ಟೀಂ ಇಂಡಿಯಾ ಜೆರ್ಸಿಯನ್ನು ಕೇಸರೀಕರಣಗೊಳಿಸುವ ಬಿಸಿಸಿಐ ನಿರ್ಧಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ಇನ್ನು ಜರ್ಸಿಯಲ್ಲಿ ಈ ಮೂರು ಬಣ್ಣದ ಬದಲು ಕೇಸರಿಯನ್ನು ಮಾತ್ರ ಸೇರಿಸಿದ್ದೇಕೆ ಎಂದು ಅಸಿಮ್ ಅಜ್ಮಿ ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ ಸಹ ಬ್ಲೂ ಬಣ್ಣದ ಜರ್ಸಿ ಬಳಸುವುದರಿಂದ ಟೀಂ ಇಂಡಿಯಾದ ಹೊಸ ಜೆರ್ಸಿ ಕುರಿತಂತೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿಲ್ಲ. ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜೆರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ಬಣ್ಣದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.
SCROLL FOR NEXT