ಕ್ರಿಕೆಟ್

ಸೇನಾ ಕ್ಯಾಪ್ ಧರಿಸಿ ಆಟವಾಡಿದ ಭಾರತೀಯ ಕ್ರಿಕೆಟಿಗರು, ಬಿಸಿಸಿಐ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ ಪಿಸಿಬಿ

Srinivasamurthy VN
ಇಸ್ಲಾಮಾಬಾದ್: ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಮೂರನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರು ಸೇನಾ ಕ್ಯಾಪ್ ಧರಿಸಿ ಆಟವಾಡಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಸಿಸಿಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಐಸಿಸಿಯನ್ನು ಒತ್ತಾಯಿಸಿದೆ.
ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ನೆನಪಿನಾರ್ಥವಾಗಿ ಮತ್ತು ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಬೆಂಬಲ ಸೂಚಿಸುವ ಸಲುವಾಗಿ ತಂಡದ ಆಟಗಾರರು ಸೇನೆಯ ಕ್ಯಾಪ್ ಧರಿಸಿ ಆಟವಾಡುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದರು. 
ಈ ಕುರಿತು ಟ್ವೀಟ್ ಮಾಡಿದ್ದ ಬಿಸಿಸಿಐ, ಭಾರತ ತಂಡ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಅದಕ್ಕೆ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ಭಾರತೀಯ ವಾಯುಪಡೆಗೆ ಗೌರವ ಸೂಚಿಸುವ ಸಲುವಾಗಿ ಸೇನೆಯ ಕ್ಯಾಪ್ ಧರಿಸಿ ಆಟವಾಡಲಿದೆ. ಈ ಮೂಲಕ  ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ರಕ್ಷಣಾ ನಿಧಿಗೆ ಆರ್ಥಿಕ ನೆರವು ನೀಡುವಂತೆ ದೇಶದ ಜನತೆಯನ್ನು ಮನವಿ ಮಾಡಲಿದೆ ಎಂದು ವಿವರಿಸಿತ್ತು. 
ಇದೀಗ ಈ ಬಿಸಿಸಿಐ ಮತ್ತು ಟೀಂ ಇಂಡಿಯಾ ನಡೆಗೆ ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಒತ್ತಾಯಿಸಿ ಐಸಿಸಿಗೆ ಮನವಿ ಮಾಡಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ, 'ಭಾರತೀಯ ಆಟಗಾರರು ತಮ್ಮ ಸಮವಸ್ತ್ರದ ಕ್ಯಾಪ್ ಬದಲಿಗೆ ಸೇನಾ ಕ್ಯಾಪ್ ಧರಿಸಿದ್ದನ್ನು ಇಡೀ ವಿಶ್ವವೇ ನೋಡಿದೆ. ಆದರೆ, ಐಸಿಸಿ ಅದನ್ನು ಗಮನಿಸಲಿಲ್ಲವೇ? ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಷಯದ ಕುರಿತು ಪ್ರಸ್ತಾಪಿಸಬೇಕಾಯಿತೇ ಎಂದು ಕಿಡಿಕಾರಿದ್ದಾರೆ.
SCROLL FOR NEXT