ಕ್ರಿಕೆಟ್

ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೆ ಐಪಿಎಲ್ ನಿರ್ಣಾಯಕ: ಬಿಸಿಸಿಐ

Srinivasamurthy VN
ನವದೆಹಲಿ: ಬಿಸಿಸಿಐನ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ನ 12ನೇ ಆವೃತ್ತಿ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಕೂಡ ಐಪಿಎಲ್ ನತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.
ಹೌದು.. ವಿಶ್ವಕಪ್ ಟೂರ್ನಿ ಸನಿಹದಲ್ಲಿರುವಂತೆಯೇ ಆರಂಭವಾಗಲಿರುವ ಐಪಿಎಲ್ ಈ ಬಾರಿ ಮತ್ತೊಂದು ವಿಚಾರಕ್ಕೆ ಕುತೂಹಲ ಕೆರಳಿಸಿದ್ದು, ಈ ಬಾರಿ ಐಪಿಎಲ್ ಕೇವಲ ಆಟಗಾರರ ಬೊಕ್ಕಸ ತುಂಬಿಸುವುದು ಮಾತ್ರವಲ್ಲ.. ಬದಲಿಗೆ ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಆಟಗಾರರ ಆಯ್ಕೆಗೂ ವೇದಿಕೆಯಾಗಲಿದೆ. ಐಪಿಎಲ್ ನಲ್ಲಿನ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡೇ ವಿಶ್ವಕಪ್ ಟೂರ್ನಿಗೆ ತಂಡ ರಚನೆ ಮಾಡಲಿದ್ದೇವೆ ಎಂದು ಬಿಸಿಸಿಐ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಗಳು ವಿಶ್ವಕಪ್ ಟೂರ್ನಿಯ ಹೊಸ್ತಿಲಲ್ಲಿ ಆರಂಭವಾಗಲಿರುವ ಐಪಿಎಲ್ ಟೂರ್ನಿ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಲಿದ್ದು, ಟೂರ್ನಿಯಲ್ಲಿ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ. 
ಇನ್ನು ಕಳೆದ ಆಸಿಸ್ ವಿರುದ್ಧದ ಏಕದಿನ ಟೂರ್ನಿಯುದ್ದಕ್ಕೂ ತಂಡಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಾಮಿಸಿದ್ದ ನಾಲ್ಕನೇ ಕ್ರಮಾಂಕಕ್ಕೆ ಒಟ್ಟು ನಾಲ್ಕು ಮಂದಿ ಆಟಗಾರರು ತೀವ್ರ ಪೈಪೋಟಿ ಮಾಡುತ್ತಿದ್ದು, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರನ ಆಯ್ಕೆಯಾಗುವ ಸಾಧ್ಯತೆ ಇದೆ.
ಅಂತೆಯೇ ತಾಂತ್ರಿಕವಾಗಿ 4 ಬ್ಯಾಟ್ಸಮನ್ ಗಳು ಒಬ್ಬರು ಅಥವಾ ಇಬ್ಬರು ಆಲ್ ರೌಂಡರ್ ಗಳು ಐದು ಅಥವಾ ಆರು ಮಂದಿಯ ಬೌಲರ್ ಗಳ ಆಯ್ಕೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ. ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ ಆಯ್ಕೆ ಅಂತಿಮವಾಗಿದ್ದರೂ, 2ನೇ ವಿಕೆಟ್ ಕೀಪರ್ ಆಯ್ಕೆಯಾಗಿ ರಿಷಬ್ ಪಂತ್ ಆಯ್ಕೆ ಸಾಧ್ಯತೆ ಇದೆ. ಅಂತೆಯೇ ದಿನೇಶ್ ಕಾರ್ತಿಕ್ ಹೆಸರೂ ಕೂಡ ಮುಂಚೂಣಿಯಲ್ಲಿದೆ. 
ಈ  ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಕೋಚ್ ರವಿಶಾಸ್ತ್ರಿ ಅವರು, ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಆಡಲಿದ್ದಾರೆ ಎಂದು ಹೇಳಿದ್ದರು. ಆದರೆ ಇದೂ ಕೂಡ ಪರಿಸ್ಥಿತಿಗೆ ಅನುಗುಣವಾಗಲಿದೆ ಎಂದು ಹೇಳಿದ್ದರು. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ರಹಾನೆ, ಶ್ರೇಯಸ್ ಅಯ್ಯರ್ ಅವರು ಆಡುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ಮಾತನಾಡಿರುವ ಅಜಿಂಕ್ಯಾ ರಹಾನೆ, ವಿಶ್ವಕಪ್ ಟೂರ್ನಿ ಕುರಿತು ಆಲೋಚನೆ ಮಾಡುವುದಕ್ಕಿಂತ ಹಾಲಿ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ತಮ್ಮ ತಮ್ಮ ತಂಡದ ಪರ ಉತ್ತಮವಾಗಿ ಆಡುವುದರ ಕುರಿತು ಯೋಚಿ,ಬೇಕಿದೆ. ಏಕೆಂದರೆ ನಾನು ನನ್ನ ತಂಡದ ಪರ ಉತ್ತಮವಾಗಿ ಆಡದರೆ ಖಂಡಿತಾ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುತ್ತೇನೆ ಎಂದು ರಹಾನೆ ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶ್ರೇಯಸ್ ಅಯ್ಯರ್, ವಿಶ್ವಕಪ್ ಟೂರ್ನಿಗೂ ಮೊದಲು ಐಪಿಎಲ್ ನಡೆಯುತ್ತಿದೆ. ಎಲ್ಲ ಆಟಗಾರರಿಗೂ ಇದೊಂದು ಅತ್ಯುತ್ತಮ ವೇದಿಕೆಯಾಗಲಿದ್ದು, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ ಎಂದು ಹೇಳಿದ್ದಾರೆ.
SCROLL FOR NEXT