ಕ್ರಿಕೆಟ್

ಐಪಿಎಲ್‌ 12ನೇ ಆವೃತ್ತಿಗೆ ನಾಳೆ ಚಾಲನೆ, ಸಿಎಸ್‌ಕೆ ವಿರುದ್ಧ ಗೆಲುವಿನ ತುಡಿತದಲ್ಲಿ ಆರ್‌ಸಿಬಿ

Lingaraj Badiger
ಚೆನ್ನೈ:  ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ 12ನೇ ಆವೃತ್ತಿಗೆ ಶನಿವಾರ ಅದ್ಧೂರಿ ಚಾಲನೆ ನೀಡಲಾಗುತ್ತಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಟ್ಟಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ವಿರುದ್ಧ ಸೆಣಸಲು ಸಜ್ಜಾಗಿದೆ. ಉಭಯ ತಂಡಗಳು ನಾಳಿನ ಭಾರಿ ಕಾದಾಟಕ್ಕೆ ಇಲ್ಲಿನ ಚಿಪಕ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ. 
ನಾಯಕ ವಿರಾಟ್‌ ಕೊಹ್ಲಿ ಆರ್‌ಸಿಬಿ, ಇದುವರೆಗೂ ಒಂದೂ ಬಾರಿಯೂ ಐಪಿಎಲ್‌ ಚಾಂಪಿಯನ್‌ ಆಗಿಲ್ಲ. ಆದರೆ, ಧೋನಿ ನೇತೃತ್ವದ ಸಿಎಸ್‌ಕೆ 2010, 2011 ಹಾಗೂ 2018ರಲ್ಲಿ ಒಟ್ಟು ಮೂರು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದೀಗ ನಾಲ್ಕನೇ ಬಾರಿ ಚಾಂಪಿಯನ್‌ ಆಗುವ ಕಡೆ ಧೋನಿ ಪಡೆ ಚಿತ್ತ ಹರಿಸಿದೆ.
ಧೋನಿ ಐಪಿಎಲ್‌ ಆರಂಭವಾದ ಮೊದಲ ಆವೃತ್ತಿಯಿಂದಲೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕೊಹ್ಲಿ 2012ರಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 
31 ವರ್ಷದ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ, ಪ್ರಸ್ತುತ ಆವೃತ್ತಿಯಲ್ಲಿ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇ.30 ರಿಂದ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಆರಂಭವಾಗುವ ವಿಶ್ವಕಪ್‌ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರು ಐಪಿಎಲ್‌ ನಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗದಂತೆ ಸಲಹೆ ನೀಡಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯಲ್ಲಿ ಭಾರತ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಆದರೆ, ಚೆನ್ನೈ ಸೂಪರ್‌ ಕಿಂಗ್ಸ್‌ನ ಮಹೇಂದ್ರ ಸೀಂಗ್‌ ಧೋನಿ ನಾಯಕತ್ವದ ವಿರುದ್ಧ ಯಾರೂ ಪ್ರಶ್ನೆ ಮಾಡಿಲ್ಲ. 
ಪ್ರಸಕ್ತ ಆವೃತ್ತಿಯ ಉದ್ಘಾಟನಾ ಪಂದ್ಯ ಚೆನ್ನೈನಲ್ಲೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ತವರು ಅಭಿಮಾನಿಗಳ ಪ್ರೋತ್ಸಾಹ ಸಿಎಸ್‌ಕೆಗೆ ಸಿಗಲಿದೆ. 175 ಐಪಿಎಲ್‌ ಪಂದ್ಯಗಳಾಡಿರುವ ಧೋನಿ,  20 ಅರ್ಧ ಶತಕಗಳು ಸೇರಿದಂತೆ ಒಟ್ಟು 4,016 ರನ್‌ ದಾಖಲಿಸಿದ್ದಾರೆ. 
163 ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ 4, 948 ರನ್‌ ಗಳಿಸಿದ್ದಾರೆ. ಉಭಯ ತಂಡಗಳು 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು,  ಚೆನ್ನೈ 14 ರಲ್ಲಿ ಜಯ ಸಾಧಿಸಿದೆ. 7 ಪಂದ್ಯಗಳಲ್ಲಿ ಮಾತ್ರ ಬೆಂಗಳೂರ ಗೆಲುವು ಪಡೆದಿದೆ. ಒಂದು ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಗಿದೆ. 
ಚೆನ್ನೈ ವಿರುದ್ಧ ಸತತ ಆರು ಪಂದ್ಯಗಳಲ್ಲಿ ಸೋಲುವ ಮೂಲಕ ನಾಳಿನ ಪಂದ್ಯವಾಡಲು ಬೆಂಗಳೂರು ಸಜ್ಜಾಗಿದೆ. 2014ರಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಜಯ ಸಾಧಿಸಿತ್ತು. ಇದಾದ ಬಳಿಕ ಇಲ್ಲಿಯವರೆಗೂ ಒಂದೂ ಪಂದ್ಯದಲ್ಲಿ ಕೊಹ್ಲಿ ಬಳಗ ಚೆನ್ನೈ ವಿರುದ್ಧ ಗೆದ್ದಿಲ್ಲ. 
ನಾಳಿನ ಪಂದ್ಯದ ಆದಾಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫೆ.14 ರಂದು ನಡೆದಿದ್ದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಸಿಆರ್‌ಪಿಎಫ್‌ ಯೋಧರ ಕುಟುಂಬಗಳಿಗೆ ದೇಣಿಗೆ ನೀಡಲಿದೆ. 
ಸಮಯ: ರಾತ್ರಿ 20:00
ಸ್ಥಳ: ಚಿಪಕ್‌ ಕ್ರೀಡಾಂಗಣ, ಚೆನ್ನೈ
SCROLL FOR NEXT