ಕ್ರಿಕೆಟ್

ರಿಷಭ್‌ ಪಂತ್‌ ಈಗಿನ ತಲೆಮಾರಿನ ವಿರೇಂದ್ರ ಸೆಹ್ವಾಗ್‌: ಮಂಜ್ರೇಕರ್

Lingaraj Badiger
ನವದೆಹಲಿ: ಐಪಿಎಲ್‌ ಕ್ರಿಕೆಟ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಯುವ ವಿಕೆಟ್‌ ಕೀಪರ್‌ ಹಾಗೂ ಸ್ಪೋಟಕ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಪ್ರಸ್ತುತ ತಲೆಮಾರಿನ ವಿರೇಂದ್ರ ಸೆಹ್ವಾಗ್‌ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ವಿಶ್ಲೇಷಣೆಕಾರ ಸಂಜಯ್‌ ಮಂಜ್ರೇಕರ್ ಅವರು ಗುಣಗಾನ ಮಾಡಿದ್ದಾರೆ. 
ಕಳೆದ ಬುಧವಾರ ರಿಷಭ್‌ ಪಂತ್‌ 21 ಎಸೆತಗಳಲ್ಲಿ 49 ರನ್‌ ಸಿಡಿಸಿದ್ದರು. ಇವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ ಎರಡು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತ್ತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಮೊದಲ ನಾಕೌಟ್‌ ಪಂದ್ಯದಲ್ಲಿ ಗೆದ್ದ ಕೀರ್ತಿಗೆ ಡೆಲ್ಲಿ ಭಾಜನವಾಯಿತು. 
"ರಿಷಭ್‌ ಪಂತ್‌ ಈಗಿನ ತಲೆಮಾರಿನ ಸೆಹ್ವಾಗ್‌ ಇದ್ದಂತೆ. ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಅಥವಾ ಆಯ್ಕೆ ಮಾಡದೆ ಇದ್ದರೂ ಸರಿ ಅವರ ಬ್ಯಾಟಿಂಗ್‌ ಸ್ವಭಾವವನ್ನು ಬದಲಾಯಿಸಬೇಡಿ. ಪಂತ್‌ ಅವರ ಶೈಲಿಯ ರೀತಿಯಲ್ಲೇ ಬ್ಯಾಟಿಂಗ್‌ ಮಾಡಲು ಅನುವು ಮಾಡಿಕೊಡಿ" ಎಂದು ಮಂಜ್ರೇಕರ್ ಟ್ವಿಟ್‌ ಮಾಡಿದ್ದಾರೆ.   
21ರ ಪ್ರಾಯದ ಬ್ಯಾಟ್ಸ್‌ಮನ್ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಲಯದಲ್ಲಿದ್ದಾರೆ. 15 ಪಂದ್ಯಗಳಿಂದ ಒಟ್ಟು 450 ರನ್‌ ಸಿಡಿಸಿದ್ದು, 163.63 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. 
ಮಹೇಂದ್ರ ಸಿಂಗ್‌ ಧೋನಿ ಅವರ ಉತ್ತರಾಧಿಕಾರಿಯಾಗಿ ರಿಷಭ್‌ ಪಂತ್‌ ಅವರನ್ನು ಗುರುತಿಸಲಾಗಿದೆ. ಆದರೆ, ಅವರನ್ನು ಮುಂಬರುವ ಐಸಿಸಿ ವಿಶ್ವಕಪ್‌ಗೆ ಪರಿಗಣಿಸಿಲ್ಲ. ಅವರ ಸ್ಥಾನದಲ್ಲಿ ಎರಡನೇ ವಿಕೆಟ್‌ ಕೀಪರ್‌ ಆಗಿ ದಿನೇಶ್‌ ಕಾರ್ತಿಕ್‌(ವಿಕೆಟ್‌ ಕೀಪಿಂಗ್‌ ಕೌಶಲ ಆಧರಿಸಿ) ಅವರನ್ನು ತೆಗೆದುಕೊಳ್ಳಲಾಗಿದೆ. 
"ಮಹೇಂದ್ರ ಸಿಂಗ್‌ ಧೋನಿ ಗಾಯಗೊಂಡರೆ ದಿನೇಶ್‌ ಕಾರ್ತಿಕ್‌ ಅಥವಾ ರಿಷಭ್‌ ಪಂತ್‌ ಅವರನ್ನು ಎರಡನೇ ವಿಕೆಟ್‌ ಕೀಪರ್ ಆಡಿಸಲಾಗುತ್ತದೆ. ಪಂದ್ಯದಲ್ಲಿ ಬ್ಯಾಟಿಂಗ್‌ ಜತೆ ವಿಕೆಟ್‌ ಕೀಪಿಂಗ್‌ ಕೂಡ ಅತ್ಯಂತ ಮುಖ್ಯ. ಹಾಗಾಗಿ, ಪಂತ್‌ ಕೈ ಬಿಟ್ಟು ದಿನೇಶ್‌ ಕಾರ್ತಿಕ್  ಅವರನ್ನು ಐಸಿಸಿ ವಿಶ್ವಕಪ್‌ಗೆ ಮಣೆ ಹಾಕಲಾಗಿದೆ. ಪಂತ್‌ ಪ್ರತಿಭಾನ್ವಿತ ಆಟಗಾರ ಅದರಲ್ಲಿ ಅನುಮಾನವೇ ಇಲ್ಲ. ಅವರಿಗೆ ಇನ್ನೂ ಹೆಚ್ಚು ಅವಕಾಶವಿದೆ." ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌ ಪಂತ್‌ ಬದಲು ಕಾರ್ತಿಕ್‌ ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದರು.
SCROLL FOR NEXT