ಹೈದರಾಬಾದ್: ಪ್ರಸಕ್ತ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿ ಮುಂಬೈ ಇಂಡಿಯನ್ಸ್ ಗೆಲುವಿಗೆ ನೆರವಾದ ಜಸ್ಪ್ರೀತ್ ಬೂಮ್ರಾ ಅವರನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.
ಭಾನುವಾರ ರಾತ್ರಿ 150 ರನ್ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್, ಶೇನ್ ವ್ಯಾಟ್ಸನ್(80 ರನ್) ಅವರ ಅರ್ಧ ಶತಕದ ಹೊರತಾಗಿಯೂ ಕೇವಲ ಒಂದು ರನ್‌ನಿಂದ ನಾಲ್ಕನೇ ಬಾರಿ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು.
ಈ ಪಂದ್ಯದಲ್ಲಿ ಬೂಮ್ರಾ ನಾಲ್ಕು ಓವರ್‌ಗಳಲ್ಲಿ 14 ರನ್ ನೀಡಿ ಪ್ರಮುಖ ಎರಡು ವಿಕೆಟ್ ಕಬಳಿಸಿದ್ದರು. ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಯುವರಾಜ್ ಮಾಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿನ್, " ಬೂಮ್ರಾ ಒಬ್ಬ ಅದ್ಭುತ ಬೌಲರ್. ಅವರ ದಾಖಲೆಗಳನ್ನು ಗಮನಿಸಿದಾಗ ಪ್ರಸ್ತುತ ಸನ್ನಿವೇಶದಲ್ಲಿ ಅವರೊಬ್ಬ ವಿಶ್ವದ ಅತ್ಯುತ್ತಮ ಬೌಲರ್ ಎಂದೆನಿಸುತ್ತದೆ" ಎಂದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಬೂಮ್ರಾ ಮಾತನಾಡಿ, " ಪ್ರಸಕ್ತ ಆವೃತ್ತಿಯಲ್ಲಿ ಅಂತಿಮ ಘಟ್ಟದವರೆಗೂ ತಲುಪಿ, ಫೈನಲ್ ಗೆದ್ದು ಪ್ರಶಸ್ತಿಗೆ ಭಾಜನವಾಗಿದ್ದು ವಿಶೇಷ ಅನುಭವ ನೀಡಿದೆ. ಅದರಲ್ಲೂ ಇವತ್ತು ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ತಂಡದ ಗೆಲುವಿಗೆ ನೆರವಾಗಿದ್ದು ಹೆಚ್ಚು ಸಂತಸ ತಂದಿದೆ" ಎಂದು ಹೇಳಿದರು.
"ಒಂದು ದಿನದಲ್ಲಿ ಒಂದು ಎಸೆತ ಹಾಗೂ ಒಂದೇ ಸಮಯ ಎಂದು ಭಾವಿಸಿ ಪ್ರತಿಯೊಂದು ಎಸೆತ ಬೌಲಿಂಗ್ ಮಾಡುತ್ತೇನೆ. ಇದರಿಂದಾಗಿ ಎಂಥ ಒತ್ತಡವಿದ್ದರೂ ನಮಗೆ ಏನೂ ಅನಿಸುವುದಿಲ್ಲ" ಎಂದು ಬೂಮ್ರಾ ತಿಳಿಸಿದರು.
ಪ್ರಸಕ್ತ ಆವೃತ್ತಿಯಲ್ಲಿ ಬೂಮ್ರಾ 16 ಪಂದ್ಯಗಳಿಂದ 16 ವಿಕೆಟ್ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics