ನಾಟಿಂಗ್ಹ್ಯಾಮ್: ಗುರುವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್ ಸಮೀಪ ಅಧ್ಬುತ ಕ್ಯಾಚ್ ಹಿಡಿದ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ಗೆ ಟ್ವಿಟರ್ ನಲ್ಲಿ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ 104 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆದರೆ, ಈ ಪಂದ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದು, ಬೆನ್ ಸ್ಟೋಕ್ಸ್ ಹಿಡಿದ ಕ್ಯಾಚ್! ಆದಿಲ್ ರಶೀದ್ ಬೌಲಿಂಗ್ ನಲ್ಲಿ ಆಫ್ರಿಕಾದ ಆ್ಯಂಡಿಲೆ ಫೆಹ್ಲುಕ್ವಾಯೊ ಅವರು ಸ್ವೀಪ್ ಸ್ಲಾಗ್ ಶಾಟ್ ಹೊಡೆದರು. ಈ ವೇಳೆ ಚೆಂಡು ವೇಗವಾಗಿ ಬೌಂಡರಿ ಲೈನ್ ಸಮೀಪ ಹೋಗುತ್ತಿತ್ತು. ಅಲ್ಲೇ ಇದ್ದ ಬೆನ್ ಸ್ಟೋಕ್ಸ್ ಗಾಳಿಯಲ್ಲಿ ಹಾರಿ ಒಂದೇ ಕೈಯನ್ನು ಚಾಚಿ ಹಿಡಿದ ಕ್ಯಾಚ್ ನೋಡಲು ಅದ್ಭುತವಾಗಿತ್ತು. ಇದು ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಬಗ್ಗೆ ಐಸಿಸಿ "ಈ ರೀತಿಯ ಕ್ಯಾಚ್ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ" ಎಂದು ಟ್ವಿಟ್ ಮಾಡಿದೆ. ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. " ಟೂರ್ನಿಯ ಅತ್ಯುತ್ತಮ ಕ್ಯಾಚ್.." ಎಂದು ಟ್ವಿಟ್ ಮಾಡಿದ್ದಾರೆ.
ಈ ಕುರಿತು ಶ್ರೀಲಂಕಾ ಮಾಜಿ ಆಟಗಾರ ರಸೆಲ್ ಅರ್ನಾಲ್ಡ್ ಪ್ರತಿಕ್ರಿಯಿಸಿ "ವಾವ್ಹ್...ಬೆನ್ ಸ್ಟೋಕ್ಸ್ ಬಗ್ಗೆ ಏನು ಹೇಳಬೇಕು...ಎಂಥಾ ಕ್ಯಾಚ್!!! ಈ ರೀತಿಯ ಕ್ಯಾಚ್ ಹಿಡಿಯಲು ಅಭ್ಯಾಸ ಮಾಡಲು ಸಾಧ್ಯವೇ ಇಲ್ಲ. ಇಂಥ ಅದ್ಭುತ ಕ್ಯಾಚ್ ಎಂದಿಗೂ ನೋಡಲು ಸಾಧ್ಯವಿಲ್ಲ." ಎಂದು ಟ್ವಿಟ್ ಮಾಡಿದ್ದಾರೆ. ವೀಕ್ಷಕ ವಿವರಣೆಕಾರ ಹರ್ಷ್ ಬೋಗ್ಲೆ, " ಐಸಿಸಿ ವಿಶ್ವಕಪ್ ಮೊದಲನೇ ದಿನ ಹಾಗೂ ಟೂರ್ನಿಯ ಅತ್ಯುತ್ತಮ ಕ್ಯಾಚ್ ಅನ್ನು ನೋಡಿದೆವು" ಎಂದು ಟ್ವಿಟ್ ಮಾಡಿದ್ದಾರೆ.